ವಿದ್ಯಾಗಿರಿ: “ಇದು ಬೆಟ್ಟ.. ಬೆಟ್ಟದಿಂದ ಇಳಿದ ನೀರನ್ನು ಒಂದು ಚೂರು ಬಿಡದೆ ನಾವು ಬಳಸಿಕೊಳ್ಳಬಹುದು. ಸಮಗ್ರ ಕೃಷಿ ಮಾದರಿಯಿಂದ ಹಲವು ಬಗೆಯ ಕೃಷಿ ಮಾತ್ರವಲ್ಲದೆ ನೀರಿನ ಪರಿಪೂರ್ಣ ಉಪಯೋಗವೂ ಸಾಧ್ಯ” ಹೀಗೆ ವಿವರಿಸುತ್ತಾ ಹೋದರು ಆಳ್ವಾಸ್ ಕೃಷಿ ಇಂಜಿನಿಯರಿಂಗ್ ನ ವಿದ್ಯಾರ್ಥಿ ಕಿರಣ್.
ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಕೃಷಿ ಮೇಳದಲ್ಲಿ ಅದೇ ಕಾಲೇಜಿನ ಕೃಷಿ ಇಂಜಿನಿಯರಿಂಗ್ ನ ವಿದ್ಯಾರ್ಥಿಗಳು ಸಮಗ್ರ ಕೃಷಿಯ ಪರಿಕಲ್ಪನೆಯ ರೂಪವೊಂದನ್ನು ಜನರ ಮುಂದಿಟ್ಟಿದ್ದಾರೆ.
ಬೆಟ್ಟದ ತಪ್ಪಲಿನಲ್ಲಿರುವ ಊರಿನಲ್ಲಿ ಹರಿದು ಬರುವ ನೀರನ್ನು ಹೇಗೆ ಬಳಸಬಹುದು, ಅಲ್ಲಿನ ಮಣ್ಣನ್ನು ಬಳಸಿ ಯಾವ ರೀತಿಯ ಕೃಷಿಯನ್ನು ಮಾಡಬಹುದೆಂದು ಪ್ರತಿಕೃತಿಯ ಮೂಲಕ ತೋರಿಸಿಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ನಮಗೆ ಅತೀ ಅಮೂಲ್ಯ ವಸ್ತುವೆಂದರೆ ನೀರು. ಹೀಗಾಗಿ ಅತ್ಯಂತ ಕಡಿಮೆ ನೀರಿನ ಬಳಕೆಯಲ್ಲಿ ಹೆಚ್ಚಿನ ಉಪಯುಕ್ತವಾದ ಕೃಷಿ ಮಾಡುವ ಬಗ್ಗೆ ಇಲ್ಲಿ ಯು ಜನತೆಗೆ ತಿಳಿಸುವ ಪ್ರಯತ್ನ ಮಾಡಲಾಗಿದೆ.
ಇಲ್ಲಿ ಬೆಟ್ಟದ ಪ್ರತಿಕೃತಿಯೊಂದನ್ನು ತಯಾರಿಸಿ, ಎದುರಲ್ಲಿ ಭತ್ತದ ಗದ್ದೆ, ತೆಂಗು, ಅಡಿಕೆ ಕೃಷಿ, ನೀರು ಶೇಖರಣಾ ಗುಂಡಿ, ತೋಟದ ಮನೆ, ಉಪ ಬೆಳೆಗಳಾದ ಕಾಳು ಮೆಣಸು ಮುಂತಾದವುಳನ್ನು ಇಲ್ಲಿ ತೋರಿಸಲಾಗಿದೆ.
ಯುಜನತೆ ಪೇಟೆಯತ್ತ ಮನೆ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಜಾಂಬೂರಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಕೃಷಿ ಮತ್ತದರ ಸುಲಭೋಪಾಯಗಳನ್ನು ಹೇಳಲು ವಿದ್ಯಾರ್ಥಿಗಳು ಹೊರಟಿದ್ದು ಶ್ಲಾಘನೀಯ.