Advertisement

“ವಿಶ್ವ ಜಾಂಬೂರಿ’ಸೊಬಗಿಗೆ ತಲೆದೂಗಿದ “ವಿದ್ಯಾಕಾಶಿ’!

01:27 AM Dec 26, 2022 | Team Udayavani |

ಮೂಡುಬಿದಿರೆ: ದೇಶ-ವಿದೇಶದ ಸಾವಿರಾರು ಜನರ ಸಂಗಮಕ್ಕೆ ಸಾಕ್ಷಿಯಾದ ವಿಶ್ವ ಜಾಂಬೂರಿ ಸಾಂಸ್ಕೃತಿಕ-ಸಂಭ್ರಮದ ಮಹಾಪರ್ವವಾಗಿ ದೇಶದ ಇತಿಹಾಸದಲ್ಲಿ ಕಂಗೊಳಿಸಿದೆ. ಜೈನ ಕಾಶಿಯಲ್ಲಿ ಕಳೆದ ಐದು ದಿನಗಳಿಂದ ನಡೆದ ಜಾಂಬೂರಿಯು ವಿವಿಧ ಪ್ರದೇಶದ ಸಂಸ್ಕೃತಿ-ಸಾಂಸ್ಕೃತಿಕ ಉತ್ಸವದ ಮುಖೇನ ಹೊಸ ಮನ್ವಂತರ ಸೃಷ್ಟಿಸಿದೆ.

Advertisement

ವಿಶ್ವದ ಗಮನ ಜೈನಕಾಶಿ ಮೂಡು ಬಿದಿರೆಯತ್ತ ಸೆಳೆದಿರುವ “ಜಾಂಬೂರಿ’ ಹೆಸರಿಗೆ ಅನ್ವರ್ಥವಾಗುವಂತೆ ಕಳೆದ ಐದು ದಿನಗಳಲ್ಲಿ ವಿವಿಧ ಸಾಂಸ್ಕೃತಿಕ-ಸಂಭ್ರಮದ ಕಾಯಕ್ರಮ ಗಳ ಮೂಲಕ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಬ್ಬವಾಗಿ ವಿಜೃಂಭಿಸಿದೆ. ರಾಷ್ಟ್ರದ ವಿವಿಧ ಕಡೆಗಳಿಂದ ಬಂದಿರುವ ಸ್ಕೌಟ್ಸ್‌, ಗೈಡ್ಸ್‌, ರೇಂಜಸ್‌ ಮತ್ತು ರೋವರ್‌ಗಳ ಜತೆಗೆ ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಸಾರ್ವಜನಿಕರಿಗೂ ವೈಜ್ಞಾನಿಕ, ಸಾಂಸ್ಕೃತಿಕ, ರಸದೌತಣ ನೀಡುತ್ತಿದೆ.

ದೇಶದ ವಿವಿಧ ಭಾಗಗಳ ಕಲಾ ತಂಡಗಳು ಆಳ್ವಾಸ್‌ ಕಾಲೇಜು ಆವರಣದ ವಿವಿಧ ವೇದಿಕೆಗಳಲ್ಲಿ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತಿದ್ದರೆ, ವಿಜ್ಞಾನದ ಕೌತುಕಗಳ ವಿಜ್ಞಾನ ಮೇಳ, ಹಚ್ಚ ಹಸಿರಿನ ಕೃಷಿ ಮೇಳ, ಜ್ಞಾನದ ಆಗರವಾಗಿರುವ ಪುಸ್ತಕ ಮೇಳ, ವೈವಿಧ್ಯಮಯ ತಿಂಡಿ ತಿನಿಸುಗಳ ಆಹಾರ ಮೇಳಗಳು ಐದು ದಿನಗಳಲ್ಲಿ ಲಕ್ಷಾಂತರ ಮಂದಿಯನ್ನು ಸೆಳೆಯುವಲ್ಲಿ ಹಾಗೂ ಜಗತ್ತಿಗೆ ರಾಷ್ಟ್ರೀಯ ವೈವಿಧ್ಯವನ್ನು ಸಾರುವಲ್ಲಿ ಯಶಸ್ವಿಯಾಗಿದೆ.

ಎಲ್ಲೆಲ್ಲೂ ಮಕ್ಕಳ ಕಲರವ!
ವಿದೇಶ ಸೇರಿದಂತೆ ರಾಷ್ಟ್ರದ ವಿವಿಧ ಕಡೆಗಳಿಂದ ಕಳೆದ ಐದು ದಿನಗಳಲ್ಲಿ ಸುಮಾರು 70 ಸಾವಿರದಷ್ಟು ಸ್ಕೌಟ್ಸ್‌, ಗೈಡ್ಸ್‌, ರೇಂಜರ್ಸ್‌ ಮತ್ತು ರೋವರ್ಸ್‌ ವಿದ್ಯಾರ್ಥಿಗಳ ಜತೆ ಮೇಲ್ವಿಚಾರಕರು ಆಳ್ವಾಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ನಿತ್ಯ ಸರಾಸರಿ ಸುಮಾರು 1 ಲಕ್ಷಕ್ಕೂ ಅಧಿಕ ಜನ ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಸೇರುತ್ತಿದ್ದಾರೆ.

ಶನಿವಾರ 2 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು. ಆರಂಭದ ಮೂರು ದಿನಗಳಲ್ಲಿ ತಲಾ 100ಕ್ಕೂ ಅಧಿಕ ಬಸ್‌ಗಳಲ್ಲಿ ಶಾಲಾ ಕಾಲೇಜು ಮಕ್ಕಳು ಆಗಮಿಸಿದ್ದರೆ, ಶನಿವಾರ 300ಕ್ಕೂ ಅಧಿಕ ಬಸ್‌ಗಳಲ್ಲಿ ಆಗಮಿಸಿದ್ದರು.
ರವಿವಾರವೂ ಜನ ಹಾಗೂ ಶಾಲಾ ಕಾಲೇಜು ಮಕ್ಕಳು ಸಾವಿರ ಸಾವಿರ ಸಂಖ್ಯೆಯಲ್ಲಿ ಆಗಮಿಸಿದ್ದರು.

Advertisement

22 ಕಡೆ ಭೋಜನ ವ್ಯವಸ್ಥೆ!
ಪ್ರತಿನಿತ್ಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ತಂಗಿರುವ 68 ಸಾವಿರ ಸ್ಕೌಟ್ಸ್‌, ಗೈಡ್ಸ್‌, ರೇಂಜರ್ಸ್‌ ಮತ್ತು ರೋವರ್ಸ್‌ಗಳಿಗೆ ಪ್ರತ್ಯೇಕ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಸಾರ್ವಜನಿಕರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಶಿಬಿರಾರ್ಥಿಗಳಿಗೆ ಬೆಳಗ್ಗಿನ ಉಪಾಹಾರದ ವೇಳೆ ಬ್ರೆಡ್‌ ಜಾಮ್‌, ಬಾಳೆಹಣ್ಣು ಹಾಲು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಉಳಿದಂತೆ ಪ್ರತಿನಿತ್ಯ 22 ಕಡೆಗಳಲ್ಲಿ ಭೋಜನದ ವ್ಯವಸ್ಥೆ ನಡೆಯುತ್ತಿದೆ.

ಇಂದು ಸಮಾಪನ; ನಾಳೆಯೂ ಸಾಂಸ್ಕೃತಿಕ ಸಂಭ್ರಮ
ವಿಶ್ವ ಜಾಂಬೂರಿಯ ಅಧಿಕೃತ ಕಾರ್ಯಕ್ರಮ ಡಿ. 26ರ ಸೋಮವಾರ ಕೊನೆಗೊಳ್ಳಲಿದೆ. ಸಂಜೆ ಸಮಾರೋಪ ಸಮಾರಂಭ ಕೂಡ ನಡೆಯಲಿದೆ. ವಿದ್ಯಾರ್ಥಿಗಳ ಕೌಶಲ ಚಟುವಟಿಕೆಗಳು ಮುಕ್ತಾಯವಾಗಲಿವೆ. ಆದರೆ ಸಾಂಸ್ಕೃತಿಕ ಸಂಭ್ರಮ ಮಂಗಳವಾರವೂ ನಡೆಯಲಿದೆ. ಬೆಳಗ್ಗಿನಿಂದ ಸಂಜೆಯವರೆಗೆ 5 ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

– ಸತ್ಯಾ ಕೆ.

Advertisement

Udayavani is now on Telegram. Click here to join our channel and stay updated with the latest news.

Next