Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅ.30ರಿಂದ ಅಂತಾರಾಷ್ಟ್ರೀಯ ಸಮ್ಮೇಳನ

11:05 PM Oct 26, 2019 | Lakshmi GovindaRaju |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ಸಹಯೋಗ ಸಂಸ್ಥೆಗಳ ಜತೆ ಸೇರಿ ಬಡತನ ನಿವಾರಣೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆಯಲ್ಲಿ ಚರ್ಚಿಸಲು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿದೆ. ಈ ಸಮ್ಮೇಳನ ಅ.30ರಿಂದ ನ.2ರ ವರೆಗೆ ಬೆಂಗಳೂರಿನ ದೇವನಹಳ್ಳಿ ಕ್ಲಾರ್ಕ್ಸ್ ಎಕ್ಸಾಟಿಕಾ ರಿಸಾರ್ಟ್‌ ಆ್ಯಂಡ್‌ ಸ್ಪಾದಲ್ಲಿ ನಡೆಯಲಿದೆ.

Advertisement

ಸಮ್ಮೇಳನವನ್ನು ಅ.30ರಂದು ಸಂಜೆ 4.30ಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಉದ್ಘಾಟಿಸಲಿದ್ದು, ಸಿಎಂ ಯಡಿಯೂರಪ್ಪ ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಅಮೆರಿಕದ ಚಿಕಾಗೋ ನಗರದ ಪ್ರಾಧ್ಯಾಪಕ ಡಾ.ಲ್ಯಾರಿ ರೀಡ್‌ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಲಿದ್ದು, ನಬಾರ್ಡ್‌ ಸಂಸ್ಥೆ ಅಧ್ಯಕ್ಷ ಡಾ. ಹರ್ಷಕುಮಾರ್‌ ಭಾನ್ವಾಲ ಅವರು ಯೋಜನೆಯ ಸಾಧನಾ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ಅ.31 ಮತ್ತು ನ.1ರಂದು ಏಳು ಪ್ರಮುಖ ಚರ್ಚಾಗೋಷ್ಠಿಗಳಿವೆ. ಅಲ್ಲದೆ, ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ಡಾ.ಚಕ್ರವರ್ತಿ ರಂಗರಾಜನ್‌, ಮಾಜಿ ಉಪರಾಜ್ಯಪಾಲ ಡಾ.ಎಚ್‌.ಆರ್‌.ಖಾನ್‌ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ವಿಶೇಷ ಅಧಿವೇಶನ ಆಯೋಜಿಸಲಾಗಿದೆ. ನ.1ರಂದು ಸಂಜೆ 4.30ಕ್ಕೆ ನಡೆಯುವ ಸಮಾರೋಪದಲ್ಲಿ ವಿಶ್ವಸಂಸ್ಥೆಯ ಬದಲಿ ಇಂಧನ ವಿಭಾಗದ ಮಾಜಿ ಮುಖ್ಯಸ್ಥ ಡಾ.ಖ್ಯಾಂಡೆ ಯಮ್ಕುಲ್ಲಾ ಸಿಯಾರ ಲಿಯೋನ್‌ ಅವರು ಪ್ರಧಾನ ಭಾಷಣ ಮಾಡಿ, ಅಂತಾರಾಷ್ಟ್ರೀಯ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.

ಈ ಸಮ್ಮೇಳನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಅಮೆರಿಕ, ಆಸ್ಟ್ರೇಲಿಯ, ಯೂರೋಪ್‌, ಆಫ್ರಿಕಾ ಮತ್ತು ಏಷ್ಯಾ ಖಂಡದ 80ಕ್ಕೂ ಹೆಚ್ಚಿನ ದೇಶದ ಪ್ರತಿನಿಧಿಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಎಲ್‌.ಎಚ್‌.ಮಂಜುನಾಥ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next