Advertisement

Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ

12:45 AM Dec 19, 2024 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಜಗಳ ತೀವ್ರಗೊಂಡಿರುವುದರ ಮಧ್ಯೆಯೇ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದಿಲ್ಲಿಗೆ ದೌಡಾಯಿಸಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಮಾಡುವ ಮೂಲಕ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಆದರೆ ಪಕ್ಷದ ಆಂತರಿಕ ಭಿನ್ನಮತದ ಬಗ್ಗೆ ಒಂದಕ್ಷರವನ್ನೂ ದೂರದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಪ್ರಧಾನಿ ಜತೆಗೆ ಸುಮಾರು 15 ನಿಮಿಷಗಳ ಬಗ್ಗೆ ಚರ್ಚೆ ನಡೆಸಿದ ವಿಜಯೇಂದ್ರ ತಾವು ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಘಟನಾತ್ಮಕ ಸಾಧನೆಯ ಪುಸ್ತಕವನ್ನು ನೀಡಿದ್ದಾರೆ. ಸಂಘಟನಾತ್ಮಕವಾಗಿ ನಡೆಸಬೇಕಾದ ಕಾರ್ಯ ಚಟುವಟಿಕೆ ಹಾಗೂ ಹೋರಾಟದ ಬಗ್ಗೆ ಮೋದಿ ಮಾರ್ಗದರ್ಶನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಊಹಿಸಿದ್ದೇನೂ ನಡೆದಿಲ್ಲ
ವಿಜಯೇಂದ್ರ ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದಂತೆ ಬೆಳಗಾವಿಯಲ್ಲಿ ಬೀಡು ಬಿಟ್ಟಿರುವ ಬಿಜೆಪಿ ಪಾಳಯದಲ್ಲಿ ಒಂದಿಷ್ಟು ಚರ್ಚೆಗಳು ನಡೆದಿದ್ದವು. ಆದರೆ ಅಂಥ ಊಹಾಪೋಹಗಳಿಗೆ ಇಂಬುಕೊಡುವ ಯಾವ ವಿದ್ಯಮಾನವೂ ವಿಜಯೇಂದ್ರ ದಿಲ್ಲಿ ಭೇಟಿ ಸಂದರ್ಭ ಆಗಿಲ್ಲ. ಇನ್ನು ಜೆ.ಪಿ. ನಡ್ಡಾ, ಅಮಿತ್‌ ಶಾ ಭೇಟಿಗೆ ಸಮಯಾವಕಾಶ ಸಿಗದೇ ಇರುವಾಗ ಖುದ್ದು ಪ್ರಧಾನಿಯ ಭೇಟಿಗೆ ಅವಕಾಶ ಪಡೆದಿದ್ದೇ ವಿಜಯೇಂದ್ರ ಅವರ ಮೇಲುಗೈ ಎಂದು ವ್ಯಾಖ್ಯಾನಿಸಲಾಗುತ್ತಿದೆ.

“ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿರುವ ವಿಜಯೇಂದ್ರ, ರಾಜ್ಯಾಧ್ಯಕ್ಷನಾಗಿ ನೇಮಕಗೊಂಡು 1 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿಯನ್ನು ಭೇಟಿಯಾಗಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದಿದ್ದೇನೆ. ನಾನು ಈ ವೇದಿಕೆಯನ್ನು ಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆ ಚರ್ಚಿಸುವುದಕ್ಕೆ ಬಳಸಿಕೊಂಡಿಲ್ಲ ಎಂದರು.

ದಿಲ್ಲಿಯಲ್ಲೇ ಉಳಿದುಕೊಂಡಿದ್ದೇಕೆ?
ಪ್ರಧಾನಿ ಭೇಟಿ ಬಳಿಕವೂ ವಿಜಯೇಂದ್ರ ದಿಲ್ಲಿಯಲ್ಲೇ ಉಳಿದುಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಯತ್ನಾಳ್‌ ಬಣ ಹಾಗೂ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಬಳಿಕ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿಯಾಗಲಿದ್ದಾರೆ ಎನ್ನ‌ಲಾಗುತ್ತಿದೆ. ಸಮಯಾವಕಾಶ ಕೇಳಿರುವುದರಿಂದ ಗುರುವಾರವೂ ವಿಜಯೇಂದ್ರ ವಿಧಾನಸಭಾ ಅಧಿವೇಶನಕ್ಕೆ ಹಾಜರಾಗುವುದಿಲ್ಲ. ರಾತ್ರಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಆ ಬಳಿಕ ಶಿಕಾರಿಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next