Advertisement
ಈ ಮೈದಾನದ ಮೂಲ ಹೆಸರು ಕೇಂದ್ರ ಮೈದಾನ ಅಥವಾ ಸೆಂಟ್ರಲ್ ಮೈದಾನ್. ಪ್ರಥಮ ಪ್ರಧಾನಿ ನೆಹರೂ ಇಲ್ಲಿ ಪೆವಿಲಿಯನ್ ಉದ್ಘಾಟಿಸಿದ ಬಳಿಕ ಇದು ನೆಹರೂ ಮೈದಾನ ಎಂದಾಯಿತು. ವಿಶೇಷವೆಂದರೆ ಪಂಡಿತ್ ನೆಹರೂ ಸ್ವಾತಂತ್ರ್ಯಪೂರ್ವದ ಆಗಿನ ಕಾಂಗ್ರೆಸ್ ಪರವಾಗಿ ಇಲ್ಲಿ ಪ್ರಥಮ ಭಾಷಣ ಮಾಡಿದ್ದು 10-2-1937ರಂದು. 1935ರಲ್ಲಿ ರಾಜ್ಯಾಂಗ ಘಟನೆಯ ತಿದ್ದುಪಡಿಯ ಅನುಸಾರವಾಗಿ, ಸ್ವಲ್ಪ ಆಡಳಿತವನ್ನು ಪ್ರಜಾಪ್ರತಿನಿಧಿಗಳಿಗೆ ನೀಡಲಾಗಿತ್ತು. ಕಾಂಗ್ರೆಸ್ಸಿಗರು ಸ್ಪರ್ಧೆಗೆ ನಿರ್ಧರಿಸಿದರು. ಆಗಿನ ಇಲ್ಲಿನ ಕಾಂಗ್ರೆಸ್ ನಾಯಕರು ಕಾರ್ನಾಡು ಸದಾಶಿವ ರಾಯರ ನೇತೃತ್ವದಲ್ಲಿ ವಿನಂತಿಸಿದಂತೆ ಪ್ರಚಾರಕ್ಕೆ ನೆಹರೂ ಮಂಗಳೂರಿಗೆ ಬಂದಿದ್ದರು. ಸ್ವಾತಂತ್ರ್ಯಾನಂತರವೂ ನೆಹರೂ ಮಂಗಳೂರಿಗೆ ಬಂದಿದ್ದರು. 25-12-1951ರಂದು ಅವರು ಮುಂಬಯಿಯಿಂದ ಪ್ರಥಮ ವಿಮಾನದಲ್ಲಿ ಆಗಮಿಸುವ ಮೂಲಕ ಬಜಪೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು.
ಆ ಬಳಿಕ ಅವರ ಪುತ್ರಿ ಇಂದಿರಾ ಗಾಂಧಿಗೆ ನೆಹರೂ ಮೈದಾನ ಅಚ್ಚುಮೆಚ್ಚಿನ ವೇದಿಕೆಯಾಗಿತ್ತು. ಲೋಕಸಭೆ – ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಅವರು ಬರುತ್ತಿದ್ದರು. ಸ್ಥಳೀಯ ಕೃಷಿ ಪರಂಪರೆಯ ಮುಟ್ಟಾಳೆ ಧರಿಸಿ ಮಹಿಳೆಯರೊಂದಿಗೆ ಸಂಭ್ರಮಿಸುತ್ತಿದ್ದರು. 31-10-1984ರಂದು ಇಂದಿರಾ ಹತ್ಯೆಯಾಯಿತು. ಬಳಿಕದ ಲೋಕಸಭಾ ಚುನಾವಣೆಯು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ರಾಜೀವ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯಿತು. ನೆಹರೂ ಮೈದಾನದಲ್ಲಿ ಆ ಚುನಾವಣೆಯ ಪ್ರಚಾರ ಭಾಷಣದಲ್ಲಿ ಅವರು ಭಾಗವಹಿಸಿದರು. 1991ರಲ್ಲಿ (ಹತ್ಯೆಗೆ ಮೊದಲು) ಅವರು ಇಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದರು. 1991ರಲ್ಲಿ ಅವರು ಎಲ್ಲ ಭದ್ರತಾ ವ್ಯವಸ್ಥೆಗಳನ್ನು ಬದಿಗಿರಿಸಿ, ಜನತೆಯೊಡನೆ ಈ ಪರಿಸರದಲ್ಲಿ ನಡೆದುಕೊಂಡು ಬಂದು ವೇದಿಕೆಯನ್ನೇರಿದ್ದರು. ರಾಜೀವ್ ಹತ್ಯೆಯ ಬಳಿಕ ಈಗ ಅವರ ಪುತ್ರ ರಾಹುಲ್ ಪಕ್ಷದ ಹೊಣೆ ವಹಿಸಿಕೊಂಡಿದ್ದಾರೆ. ಕಳೆದ ಚುನಾವಣೆ ಸಂದರ್ಭ ಅವರು ಸಾರ್ವಜನಿಕ ಪ್ರಚಾರ ಸಭೆಯಲ್ಲಿ ನೆಹರೂ ಮೈದಾನದಲ್ಲಿ ಭಾಗವಹಿಸಿದರು. ಈ ಮೂಲಕ ಇಲ್ಲಿ ನೆಹರೂ ಮೈದಾನದಲ್ಲಿ ನೆಹರೂ ಕುಟುಂಬದ ನಾಲ್ಕು ತಲೆಮಾರುಗಳ ನಾಯಕರು ಭಾಗವಹಿಸಿದಂತಾಯಿತು. ಸೋನಿಯಾ ಗಾಂಧಿ ಅವರು ಕೂಡ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದಾರೆ. ಪ್ರಿಯಾಂಕಾ ಕೂಡ ತಾಯಿಯ ಜತೆ ಭಾಗವಹಿಸಿದ್ದಾರೆ. ನೆಹರೂ, ಇಂದಿರಾ, ರಾಜೀವ್ ಅವರು ಅಖೀಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಎಂಬ ನೆಲೆಯಲ್ಲೂ ನೆಹರೂ ಮೈದಾನದಲ್ಲಿ ಭಾಷಣ ಮಾಡಿದ್ದಾರೆ. ಈಗ ರಾಹುಲ್ ಕೂಡ ಪಕ್ಷಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತನ್ಮೂಲಕ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನೆಹರೂ ಕುಟುಂಬದ ನಾಲ್ಕು ತಲೆಮಾರಿನ ನಾಯಕರು ಇಲ್ಲಿ ಭಾಗವಹಿಸಿದ ದಾಖಲೆ ನಿರ್ಮಾಣ.
Related Articles
Advertisement