Advertisement
ಸದ್ಯಕ್ಕೆ ರೈತರು ಪಡೆಯುತ್ತಿರುವ ಸಾಮಾನ್ಯ ಕೃಷಿ ಸಾಲದ ಮೇಲೆ ಶೇ. 4ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಅಲ್ಪಾವಧಿ ಕೃಷಿ ಸಾಲಗಳ ಮೇಲೆ ಶೇ. 7ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಈಗ ಚಾಲ್ತಿಯಲ್ಲಿರುವಂತೆ ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡುವ ಸಾಮಾನ್ಯ ಕೃಷಿ ಸಾಲದ ಮೇಲಿನ ಬಡ್ಡಿ ದರಕ್ಕೆ ಶೇ.2ರಷ್ಟು ರಿಯಾಯಿತಿ, ಅಲ್ಪಾವಧಿ ಕೃಷಿ ಸಾಲದ ಮೇಲಿನ ಬಡ್ಡಿಯಲ್ಲಿ ಶೇ. 5ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇವೆರಡರಿಂದಲೇ ಬೊಕ್ಕಸಕ್ಕೆ ಈಗ 15,000 ಕೋಟಿ ರೂ. ಹೊರೆ ಬೀಳುತ್ತಿದೆ. ಈ ಎಲ್ಲಾ ಕೃಷಿ ಸಾಲಗಳ ಬಡ್ಡಿ ಮನ್ನಾ ಮಾಡಿದರೆ ಒಟ್ಟು 30,000 ಕೋಟಿ ರೂ. ಹೊರೆ ಬೀಳಲಿದೆ ಎನ್ನಲಾಗಿದೆ. ಇನ್ನು, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಬೆಳೆ ವಿಮೆಗಳಿಗಾಗಿ ರೈತರಿಂದ ವಾರ್ಷಿಕ 5,000 ಕೋಟಿ ರೂ. ಪ್ರೀಮಿಯಂ ಹರಿದುಬರುತ್ತಿದೆ. ಇದನ್ನು ಮನ್ನಾ ಮಾಡಿದರೆ, ಸರ್ಕಾರದ ಮೇಲೆ ಮತ್ತೆ 5,000 ಕೋಟಿ ರೂ. ಹೊರೆ ಬೀಳುತ್ತದೆ.
ಈರುಳ್ಳಿ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ಈರುಳ್ಳಿ ರಫ್ತಿನ ಮೇಲೆ ವಿಧಿಸಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ದ್ವಿಗುಣಗೊಳಿಸಲು ಕೇಂದ್ರ ತೀರ್ಮಾನಿಸಿದೆ. ಅದರಿಂದಾಗಿ, ಎಂಎಸ್‌ಐಎಎಸ್ ವತಿಯಿಂದ ರಫ್ತಾಗುವ ಈರುಳ್ಳಿಯ ಮೇಲೆ ಶೇ. 5ರಷ್ಟು ಇರುವ ಪ್ರೋತ್ಸಾಹ ಧನ ಇದನ್ನು ಶೇ. 10ಕ್ಕೆ ಏರಲಿದೆ. ಇದೇ ವರ್ಷ ಜುಲೈನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇ. 5ರಷ್ಟು ಪ್ರೋತ್ಸಾಹ ಧನ ವಿಧಿಸಲಾಗಿತ್ತು. 3 ಆಯ್ಕೆಗಳ ಪರಿಶೀಲನೆ
ರೈತರ ಪ್ಯಾಕೇಜ್‌ಗೆ ಸಂಬಂಧಿಸಿ ಪ್ರಧಾನಿ ಮೋದಿ ಅವರು 3 ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವೆಂದರೆ, ಭೂಮಿ ಹೊಂದಿರುವ ರೈತರಿಗೆ ನೇರವಾಗಿ ಎಕರೆಗೆ 1,700-2 ಸಾವಿರ ರೂ. ಪಾವತಿಸುವುದು, ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಿದ ನಂತರ, ಸರ್ಕಾರ ನಿಗದಿಪಡಿಸಿದ ಬೆಲೆಗೂ, ಅವರು ಮಾರಾಟ ಮಾಡಿದ ಬೆಲೆಗೂ ನಡುವೆ ಇರುವ ಅಂತರದ ಮೊತ್ತವನ್ನು ಸರ್ಕಾರವೇ ಭರಿಸುವುದು ಮತ್ತು ಪ್ರತಿ ವ್ಯಕ್ತಿಯ 1 ಲಕ್ಷ ರೂ.ವರೆಗಿನ ಬೆಳೆ ಸಾಲವನ್ನು ಮನ್ನಾ ಮಾಡುವುದು. ಈ ಪೈಕಿ ಮೊದಲನೆಯ ಯೋಜನೆಗೆ 1 ಲಕ್ಷ ಕೋಟಿ ರೂ, ಎರಡನೆಯದಕ್ಕೆ 50,000 ಕೋಟಿ ರೂ. ಹಾಗೂ ಮೂರನೆಯ ಯೋಜನೆಗೆ ಬರೋಬ್ಬರಿ 3 ಲಕ್ಷ ಕೋಟಿ ರೂ.ಗಳಷ್ಟು ಹೊರೆ ಸರ್ಕಾರದ ಬೊಕ್ಕಸದ ಮೇಲೆ ಬೀಳಲಿದೆ ಎಂದು ಹೇಳಲಾಗಿದೆ.