Advertisement
ಹಂಸಕ್ಕೆ ಪೇಂಟು ಬಳಿದವರಾರು?ಯಾವತ್ತಾದರೂ ಹಂಸದ ಚಿತ್ರ ಬರೆದಿದ್ದೀರಾ? ಬರೆದಿದ್ದರೆ ಆ ಚಿತ್ರಕ್ಕೆ ಬಣ್ಣ ತುಂಬುವುದು ಬಹಳ ಸುಲಭ ಎನ್ನುವ ಸಂಗತಿಯೂ ತಿಳಿದಿರುತ್ತದೆ. ಏಕೆಂದರೆ, ಬಿಳಿ ಹಾಳೆಯ ಮೇಲೆ ಚಿತ್ರ ಬಿಡಿಸುವುದರಿಂದ, ಹಂಸದ ಬಣ್ಣವೂ ಬಿಳಿಯೇ ಆಗಿರುವುದರಿಂದ ಬಣ್ಣ ಬಳಿಯುವ ಅಗತ್ಯವೇ ಬೀಳುವುದಿಲ್ಲ. ಬರೀ ನೀರು ಮತ್ತು ಆಕಾಶಕ್ಕೆ ಬಣ್ಣ ತುಂಬಿದರೆ ಆಯಿತು. ಆದರೆ ಹಂಸಗಳನ್ನು ಕಣ್ಣಾರೆ ಕಂಡಾಗ ಮಾತ್ರ ಅವುಗಳ ಮೈಮೇಲೆ ಬಿಳಿ ಗಾಢವಾಗಿದ್ದರೂ ಕೆಂಪು, ಹಳದಿ ಅಥವಾ ಕೇಸರಿ ಮೂರರಲ್ಲೊಂದು ಬಣ್ಣದ ಲೇಪನ ಇರುವುದು ಗಮನಕ್ಕೆ ಬಂದಿರುತ್ತದೆ. ಬಣ್ಣ ನೋಡಿ ಮರುಳಾಗದಿರಿ ಎಂಬ ಹಿರಿಯರ ಮಾತು ನೆನಪಿದೆ ತಾನೇ? ಆ ಮಾತನ್ನು ಹಂಸಗಳ ವಿಚಾರದಲ್ಲೂ ಅಳವಡಿಸಿಕೊಳ್ಳತಕ್ಕದ್ದು. ಏಕೆಂದರೆ, ಹಂಸಗಳ ಮೈಮೇಲೆ ಯಾವ ಬಣ್ಣದ ಲೇಪನ ಕಂಡುಬಂದರೂ ಅದು ಅದರ ನಿಜವಾದ ಬಣ್ಣವಲ್ಲ. ಹಾಗೆಂದು ಆ ಬಣ್ಣ ಹೋಳಿಯಾಟದಿಂದ ಬಂದಿದ್ದೂ ಅಲ್ಲ. ಅವುಗಳು ತಿನ್ನುವ ಆಹಾರದಿಂದ ಬಂದಿದ್ದು. ಹಂಸಗಳು ಆಹಾರ ಕ್ಕಾಗಿ ಆಲ್ಗೇಯನ್ನು ತಿನ್ನುತ್ತವೆ. ಆಲ್ಗೇಗಳಲ್ಲಿ ಕೆರೋಟಿನಾಯ್ಡ ಪಿಗ್‌ಮೆಂಟುಗಳಿರುತ್ತವೆ. ಹಂಸಗಳ ಮೈಮೇಲೆ ಬಣ್ಣ ಬರಲು ಇವುಗಳೇ ಕಾರಣ. ಯಾವ ಯಾವ ರೀತಿಯ ಆಹಾರವನ್ನು ಸೇವಿಸುತ್ತವೆ ಎನ್ನುವುದರ ಮೇಲೆ ಅವುಗಳ ಬಣ್ಣ ನಿರ್ಧರಿತವಾಗುತ್ತದೆ!
ಯಾವುದೇ ಪ್ರಾಣಿ ಹೊರಡಿಸುವ ದನಿ ತಮ್ಮ ಸಹವರ್ತಿ ಯೊಡನೆ ಸಂವಹಿಸಲು ಎಂದು ನಾವು ತಿಳಿದಿದ್ದೇವೆ. ಆದರೆ, ಅದು ನಿಜವಾಗಲೇಬೇಕಿಲ್ಲ ಎನ್ನುವುದನ್ನು ತಿಳಿಸುತ್ತದೆ ಈ ಪ್ರಾಣಿ. ಇದು ಬೆಕ್ಕು. ನಾವು ಯಾವ ನೆಲದಲ್ಲಿ ವಾಸಿಸುತ್ತೇವೋ, ಯಾವ ಪ್ರದೇಶದ ನೀರು ಗಾಳಿ ಸೇವಿಸುತ್ತೇವೋ ಆ ನೆಲದ ಭಾಷೆಯನ್ನು ಕಲಿಯಬೇಕಾಗಿದ್ದು ನ್ಯಾಯ ಎನ್ನುವುದು ಹಲವರ ಅಭಿಪ್ರಾಯ. ಅದರಲ್ಲೂ ಕನ್ನಡಿಗರು ಈ ವಿಚಾರದಲ್ಲಿ ಹೃದಯವಂತರು. ಎಲ್ಲಿ ವಾಸಿಸುತ್ತೇವೋ, ಯಾರೊಡನೆ ಸಂವಹಿಸುತ್ತೇವೋ ಅವರ ಭಾಷೆಯನ್ನು ಕಲಿತು ಮಾತನಾಡುತ್ತೇವೆ. ಕನ್ನಡಿಗರಷ್ಟೇ ಹೃದಯ ವೈಶಾಲ್ಯತೆ ಇರುವುದು ಬೆಕ್ಕಿಗೆ. ಅದು ಮೀಯಾಂವ್ ಮೀಯಾಂವ್ ಸದ್ದು ಮಾಡುತ್ತದೆ ಎನ್ನುವುದು ಪುಟ್ಟ ಮಗುವಿಗೂ ಗೊತ್ತಿರುತ್ತೆ. ಆದರೆ, ಬೆಕ್ಕು ಆ ಸದ್ದನ್ನು ಹೊರಡಿಸುವುದು ಸಹಜೀವಿಗಾಗಿ ಅಲ್ಲ. ಇನ್ನೊಂದು ಬೆಕ್ಕಿನ ಜೊತೆ ಸಂವಹನ ನಡೆಸಲಲ್ಲ. ಅದು ಮ್ಯಾಂವ್ ಎನ್ನುವುದು ಮನುಷ್ಯನಿಗಾಗಿ, ಅವನ ಜೊತೆ ಸಂವಹನ ನಡೆಸಲು. ಇದು ಅಚ್ಚರಿ ಎನ್ನಿಸಬಹುದು. ಆದರೆ, ಬೆಕ್ಕುಗಳು ತನ್ನ ಯಜಮಾನನಿಗೆ ವಂದನೆ ಸಲ್ಲಿಸಲು, ಮನುಷ್ಯರ ಗಮನವನ್ನು ತನ್ನತ್ತ ಸೆಳೆಯಲು, ಹಸಿವಾಗಿರುವುದನ್ನು ಸೂಚಿಸಲು ಮುಚ್ಚಿದ ಬಾಗಿಲು/ ಕಿಟಕಿ ತೆರೆಯಲು ಹಾಗೂ ಇಂಥವೇ ಕಾರಣಗಳಿಗೆ ಬೆಕ್ಕುಗಳು ಮ್ಯಾಂವ್ ಎನ್ನುತ್ತವೆ. — ಹರ್ಷವರ್ಧನ್ ಸುಳ್ಯ