ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವಂತೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಿಂದೂ ಮತಗಳನ್ನು ಸೆಳೆಯಲು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ. ಅಮೆರಿಕ, ಬಾಂಗ್ಲಾದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಹಿಂದೂಗಳ ಹಕ್ಕು ರಕ್ಷಿಸುವುದಾಗಿ ಟ್ರಂಪ್ ಘೋಷಿಸಿರುವುದು ಹಿಂದೂ ಅಮೆರಿಕನ್ನರಿಗೆ ಹೊಸ ಭರವಸೆ ಮೂಡಿಸಿದೆ.
ಟ್ರಂಪ್ ಹೇಳಿಕೆಯನ್ನು ಹಿಂದೂ ಅಮೆರಿಕನ್ನರು ಸ್ವಾಗತಿಸಿದ್ದು, “ಟ್ರಂಪ್ ಅವರಿಗೆ ಕೃತಜ್ಞತೆಗಳು. ಅವರೊಬ್ಬ ಶ್ರೇಷ್ಠ ನಾಯಕ. ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಕಮಲಾ ಹ್ಯಾರಿಸ್ ಈವರೆಗೆ ತುಟಿ ಬಿಚ್ಚಿಲ್ಲ. ನನ್ನ ಪ್ರಕಾರ, ಈ ಚುನಾವಣೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಗಾಳಿ ಬೀಸಲಿದೆ’ ಎಂದು ಹಿಂದೂಸ್ ಫಾರ್ ಅಮೆರಿಕ ಹೇಳಿದೆ.
ಗುರುವಾರ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದ ಟ್ರಂಪ್, ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಇತರೆ ಅಲ್ಪಸಂಖ್ಯಾಕರ ಮೇಲೆ ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿದ್ದರು. “ನಾನು ಅಧ್ಯಕ್ಷನಾಗಿರುತ್ತಿದ್ದರೆ ಇಂಥದ್ದು ನಡೆಯಲು ಬಿಡುತ್ತಿರಲಿಲ್ಲ. ಆದರೆ ಹಾಲಿ ಅಧ್ಯಕ್ಷ ಬೈಡೆನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಮೆರಿಕದಲ್ಲಿರುವ ಮತ್ತು ಜಗತ್ತಿನಲ್ಲಿರುವ ಹಿಂದೂಗಳನ್ನು ನಿರ್ಲಕ್ಷಿಸಿದ್ದಾರೆ. ಕಟ್ಟರ್ ಎಡಪಂಥೀಯರ ಹಿಂದೂ ವಿರೋಧಿ ಅಜೆಂಡಾದಿಂದ ಹಿಂದೂ ಅಮೆರಿಕನ್ನರನ್ನು ನಾನು ರಕ್ಷಿಸುತ್ತೇನೆ. ನನ್ನ ಆಡಳಿತಾವಧಿಯಲ್ಲಿ ನಾನು ನನ್ನ ಸ್ನೇಹಿತ ಮೋದಿ ಹಾಗೂ ಭಾರತದೊಂದಿಗೆ ಉತ್ತಮ ಪಾಲುದಾರಿಕೆ ಹೊಂದುತ್ತೇನೆ ಎಂದು ಘೋಷಿಸಿದ್ದರು.
ಶತ್ರುಗಳ ಪಟ್ಟಿ ತರಲಿದ್ದಾರೆ ಟ್ರಂಪ್: ಹ್ಯಾರಿಸ್
ಲಾಸ್ ವೇಗಾಸ್ ರ್ಯಾಲಿಯಲ್ಲಿ ಶುಕ್ರವಾರ ಮಾತನಾಡಿದ ಡೆಮಾಕ್ರಾಟ್ ಅಭ್ಯರ್ಥಿ ಕಮಲಾ ಹ್ಯಾರಿಸ್, “ಟ್ರಂಪ್ ಇತ್ತೀಚೆಗೆ ಸಂಪೂರ್ಣ ಅಸ್ಥಿರವಾಗಿದ್ದು, ಅವ ರಲ್ಲಿ ಪ್ರತೀಕಾರದ ಬೆಂಕಿ ಕಾಣಿಸುತ್ತಿದೆ. ನಾವು “ಮುಂದೇನು ಮಾಡ ಬೇಕು’ ಎಂಬ ಪಟ್ಟಿಯನ್ನು ಶ್ವೇತಭವನಕ್ಕೆ ತಂದರೆ, ಟ್ರಂಪ್ “ಶತ್ರುಗಳ ಪಟ್ಟಿ’ಯನ್ನು ತರಲಿದ್ದಾರೆ ಎಂದು ಆರೋಪಿಸಿದ್ದಾರೆ.