Advertisement

ಸಾರಿಗೆ ನೌಕರರಿಗೆ ಯುಗಾದಿ ಬಂಪರ್‌: ಅಂತರ್‌ ನಿಗಮ ವರ್ಗಾವಣೆಗೆ ಓಕೆ 

06:44 AM Mar 31, 2017 | Team Udayavani |

ಬೆಂಗಳೂರು: ಸಾರಿಗೆ ಸಂಸ್ಥೆಯ ನೌಕರರಿಗೆ ಸರ್ಕಾರ ಯುಗಾದಿ ಬಂಪರ್‌ ನೀಡಿದ್ದು, ಬಹುವರ್ಷಗಳ ಬೇಡಿಕೆಯಾಗಿದ್ದ ಅಂತರ್‌ ನಿಗಮ ವರ್ಗಾವಣೆಗೆ ಹಸಿರು ನಿಶಾನೆ ತೋರಿಸಿದೆ.

Advertisement

ಸೇವಾವಧಿಯಲ್ಲಿ ಒಂದು ಬಾರಿ ಮಾತ್ರ ಅಂತರ್‌ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ 1950ರ ರಸ್ತೆ ಸಾರಿಗೆ ನಿಗಮ ಕಾಯ್ದೆಯ ಕಲಂ 34ರಡಿ ಅವಕಾಶ ನೀಡಿ ಗುರುವಾರ (ಮಾ.30) ಸರ್ಕಾರ ಆದೇಶ ಹೊರಡಿಸಿದೆ. ಈ ಅಂತರ್‌ನಿಗಮ ವರ್ಗಾವಣೆಗೆ ಅವಕಾಶ ಮಾಡಿಕೊಡುವುದರಿಂದ ಹಲವು ವರ್ಷಗಳಿಂದ ವರ್ಗಾವಣೆ ಎದುರು ನೋಡುತ್ತಿದ್ದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಬ್ಲೂಕೆಆರ್‌ ಟಿಸಿ, ಎನ್‌ಇಕೆಆರ್‌ಟಿಸಿಯ ಸುಮಾರು 30 ಸಾವಿರಕ್ಕೂ ಹೆಚ್ಚು ನೌಕರರಿಗೆ ಅನುಕೂಲವಾಗಲಿದೆ. 

ಈ ವರ್ಗಾವಣೆ ಡ್ರೈವರ್‌. ಕಂಡಕ್ಟರ್‌, ಮೆಕಾನಿಕ್‌, ಮೇಲ್ವಿಚಾರಕೇತರರಿಗೆ ಅನ್ವಯ ವಾಗಲಿದೆ. ಉಳಿದಂತೆ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಅಂತರ್‌ ನಿಗಮ ವರ್ಗಾವಣೆ ವ್ಯಾಪ್ತಿಗೆ ಬರುವುದಿಲ್ಲ. ಸಾರಿಗೆ ಸಂಸ್ಥೆಯ 4 ನಿಗಮಗಳಲ್ಲಿ ಅಂದಾಜು 1.20 ಲಕ್ಷಕ್ಕೂ ಹೆಚ್ಚು ಅಧಿಕಾರಿ/ನೌಕರರು ಇದ್ದು, ಈ ಪೈಕಿ 1 ಲಕ್ಷಕ್ಕೂ ಹೆಚ್ಚು ನೌಕರರು ಅಂತರ್‌ನಿಗಮ ವರ್ಗಾವಣೆ ವ್ಯಾಪ್ತಿಗೆ ಬರಲಿದ್ದಾರೆ.    

ಅಂದರೆ, ಡ್ರೈವರ್‌, ಕಂಡಕ್ಟರ್‌, ಮೆಕಾನಿಕ್‌ ಹಾಗೂ ಮೇಲ್ವಿಚಾರಕೇತರ ಸಿಬ್ಬಂದಿಗಳಿದ್ದು, ಅದರಲ್ಲೂ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಯ ಸುಮಾರು 10 ರಿಂದ 15 ಸಾವಿರ ನೌಕರರು ಸೇರಿ, 30 ಸಾವಿರಕ್ಕೂ ಹೆಚ್ಚು ನೌಕರರು ವರ್ಗಾವಣೆಯನ್ನು ಅನೇಕ ವರ್ಷಗಳಿಂದ ಎದುರು ನೋಡುತ್ತಿದ್ದರು. 

ಏ.10ರೊಳಗೆ ನಿಯಮ ಸಿದ್ದ: ಅಂತರ್‌ ನಿಗಮಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ
ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಉಳಿದ ಮೂರು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರನ್ನೊಳಗೊಂಡ ಸಮಿತಿ ರಚಿಸ
ಲಾಗುವುದು. ಈ ಸಮಿತಿಯ ರೂಪುರೇಷೆ ಮತ್ತು ನಿಯಮ ಸಿದ್ದಪಡಿಸಲಿದ್ದು, ಏ.10ರೊಳಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next