ನವದೆಹಲಿ: “ಕೋವಿಡ್-19 ವೈರಸ್ ನಂಥ ಬಿಕ್ಕಟ್ಟನ್ನು ಎದುರಿಸಲು ಸರ್ಕಾರವು “ಆದದ್ದಾಗಲಿ’ ಎಂಬ ಸಿದ್ಧಾಂತವನ್ನು ಅನುಸರಿಸಬೇಕು. ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಜನರ ಖಾಸಗಿ ಸ್ವತ್ತನ್ನೂ ರಾಷ್ಟ್ರೀಯ ಸಂಪನ್ಮೂಲ ಎಂದು ಪರಿಗಣಿಸಬೇಕು…’
ಕೆಲವು ಪ್ರಗತಿಪರ ಬುದ್ಧಿಜೀವಿಗಳು “ಮಿಷನ್ ಜೈ ಹಿಂದ್’ ಎಂಬ ಹೆಸರಿನಲ್ಲಿ ಶನಿವಾರ ಇಂಥದ್ದೊಂದು ಆರ್ಥಿಕ ಕ್ರಿಯಾ ಯೋಜನೆಯನ್ನು ಸಾರ್ವಜನಿಕರ ಮುಂದಿಟ್ಟಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಯೋಗೇಂದ್ರ ಯಾದವ್, ರಾಮಚಂದ್ರ ಗುಹಾ, ಬೆಜ್ವಾಡಾ ವಿಲ್ಸನ್, ಜೀನ್ ಡ್ರೀಸ್, ಹರ್‌ಷಮಂದರ್ ಸೇರಿದಂತೆ ಹಲವು ಬುದ್ಧಿಜೀವಿಗಳು ಈ ಯೋಜನೆಯನ್ನು ಬೆಂಬಲಿಸಿ , 7 ಅಂಶಗಳ ಕ್ರಿಯಾ ಯೋಜನೆಯನ್ನು ಶನಿವಾರ ಸಾರ್ವಜನಿಕರ ಮುಂದಿಟ್ಟಿದ್ದರು.
ಕೇಂದ್ರ ಸರ್ಕಾರದ ಆರ್ಥಿಕ ಪ್ಯಾಕೇಜ್ ಜನಸಾಮಾನ್ಯರ ತ್ವರಿತ ಅಗತ್ಯ ವನ್ನು ಪೂರೈಸುತ್ತಿಲ್ಲ ಎಂದು ಆರೋಪಿಸಿದ ಇವರು, ಕೊರೊನಾವನ್ನು ಎದುರಿಸಲು 7 ಅಂಶಗಳ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದ್ದರು.
ವಿವಾದವಾಗಿದ್ದೇಕೆ?: ಮಿಷನ್ ಜೈ ಹಿಂದ್ ಯೋಜನೆಗೆ ಸಂಪನ್ಮೂಲ ಕ್ರೋಡೀಕರಿಸಲು ಸರ್ಕಾರವು “ಆದದ್ದಾ ಗಲಿ’ ಎಂಬ ಸಿದ್ಧಾಂತ (ಕಮ್ಯೂನಿಸ್ಟ್ ಮಾದರಿ ಸಿದ್ಧಾಂತ)ವನ್ನು ಅನುಸರಿಸ ಬೇಕು. ಅದರಂತೆ, ಬಿಕ್ಕಟ್ಟಿನ ಈ ಸಂದರ್ಭದಲ್ಲಿ ನಾಗರಿಕರ ಖಾಸಗಿ ಆಸ್ತಿಪಾಸ್ತಿ ಗಳನ್ನು ಅಥವಾ ದೇಶದೊಳಗೆ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು (ನಗದು, ರಿಯಲ್ ಎಸ್ಟೇಟ್, ಆಸ್ತಿಪಾಸ್ತಿ, ಬಾಂಡ್ ಇತ್ಯಾದಿ) ಬಳಸಿಕೊಳ್ಳ ಬೇಕು ಎಂಬ ಪ್ರಸ್ತಾಪವನ್ನು ಈ ಕ್ರಿಯಾಯೋಜನೆಯಲ್ಲಿ ಸೇರಿಸಲಾಗಿತ್ತು. ಜತೆಗೆ, ಈ ಉದ್ದೇಶಕ್ಕಾಗಿ ಸಂಗ್ರಹಿಸಿದ ಹೆಚ್ಚುವರಿ ಆದಾಯದಲ್ಲಿ ಶೇ.50 ಅನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗ ಳೊಂದಿಗೆ ಹಂಚಿಕೊಳ್ಳಬೇಕು. ಎಲ್ಲ ವ್ಯರ್ಥ ಹಾಗೂ ಅನಗತ್ಯ ಸಾರ್ವಜನಿಕ ವೆಚ್ಚ ಹಾಗೂ ಸಬ್ಸಿಡಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದೂ ಉಲ್ಲೇಖೀಸಲಾಗಿತ್ತು. ಆದರೆ, ನಾಗರಿಕರ ಆಸ್ತಿಗಳನ್ನು ರಾಷ್ಟ್ರೀಯ ಸಂಪನ್ಮೂಲ ಎಂದು ಪರಿಗಣಿಸುವುದು ಜನರ ಆಸ್ತಿ ಹೊಂದುವ ಹಕ್ಕಿನ ಉಲ್ಲಂಘನೆ ಎಂದು ವಾದಿಸಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಕ್ರಿಯಾಯೋಜನೆಗೆ ವಿರೋಧ ಸೃಷ್ಟಿಯಾಗುತ್ತಿದ್ದಂತೆಯೇ, ಗುಹಾ ಸೇರಿದಂತೆ ಕೆಲವರು, ನಮಗೆ ಕಳಿಸಿದ್ದ ಮೂಲ ಪ್ರತಿಯಲ್ಲಿ ಈ ಮಾಹಿತಿಯಿರಲಿಲ್ಲ. ನಮ್ಮ ಅನುಮತಿ ಪಡೆಯದೇ ಪ್ರತಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿ ನುಣುಚಿಕೊಳ್ಳಲು ಯತ್ನಿಸಿದರು.
ನಂತರ ಯೋಗೇಂದ್ರ ಯಾದವ್ ಅವರು ಪರಿಷ್ಕೃತ ಪ್ರತಿಯನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದಂತೆ, ಗುಹಾ ತಮ್ಮ ಹಿಂದಿನ ಟ್ವೀಟ್ ಅನ್ನು ಅಳಿಸಿಹಾಕಿ, ಪರಿಷ್ಕೃತ ಪ್ರತಿಯು ಸಮರ್ಪಕವಾಗಿದೆ ಎಂದು ಹೊಸದಾಗಿ ಟ್ವೀಟ್ ಮಾಡಿದರು.