Advertisement

ಅಷ್ಟ ಧಾನ್ಯಗಳ ಅಂತರಗಂಗೆ 

12:47 PM Dec 18, 2017 | |

ಜಗದೀಶ ಅಬ್ಬೇನಳ್ಳಿಯವರ ತೋಟಕ್ಕೆ ಹೋದರೆ-‘ಸಿರಿವಂತಿಕೆಯನ್ನು ಹಣದಿಂದ ಮಾತ್ರವಲ್ಲ.  ನಮ್ಮಲ್ಲಿರುವ ಆಹಾರ ಧಾನ್ಯಗಳಿಂದ ಗುರುತಿಸುವಂತಾಗಬೇಕು. ಉತ್ತಮ ಆರೋಗ್ಯವಿದ್ದರೆ ಹಣವೇಕೆ? ವಿಪರೀತ ದುಡಿಮೆಯೇಕೆ? ಕೊಂಡು ತಿನ್ನುವ ಬದಲು ಬೆಳೆದು ತಿನ್ನುತ್ತಿದ್ದೇನೆ. ನಾವು ತಿನ್ನುವ ಆಹಾರ ಆರೋಗ್ಯ ವೃದ್ದಿಸುವಂತಿರಬೇಕು. ಹದಗೆಡಿಸುವಂತಿರಬಾರದು. ಅದಕ್ಕೋಸ್ಕರವೇ ಇವೆಲ್ಲಾ’ ಅಂತ ಪ್ರಶ್ನೆ ಕೇಳುತ್ತಾರೆ. ಅವರ ಹೊಲದಲ್ಲಿ  ಅಷ್ಟ ಧಾನ್ಯಗಳ ಸಮೃದ್ದಿ ಮೈ ದಳೆದಿತ್ತು.  ಎಂಟು ಬಗೆಯ ಸಿರಿಧಾನ್ಯ ಬೆಳೆಗಳು ಹುಬ್ಬೇರಿಸುವಂತೆ ಬೆಳೆದು ನಿಂತಿದ್ದವು. 

Advertisement

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಅಣಬೂರು ಗ್ರಾಮದಲ್ಲಿ ಜಗದೀಶ್‌ ಅವರ ಹೊಲವಿದೆ. ಮೊನ್ನೆ ಮೊನ್ನೆವರೆಗೂ ಉಳಿದ ರೈತರಂತೆ ಜೋಳ ಹತ್ತಿ, ಶೇಂಗಾ ಮತ್ತಿತರ ವಾಣಿಜ್ಯ ಬೆಳೆಗಳಿಗೆ ಅಂಟಿಕೊಂಡಿದ್ದ ತಿಪ್ಪೇರುದ್ರಪ್ಪ ಈಗ ಅಬ್ಬೇನಳ್ಳಿ ತಮ್ಮ ಹೆಚ್ಚಿನ ಜಮೀನನ್ನು ಸಿರಿಧಾನ್ಯ ಬೆಳೆಗಳಿಗೆ ಮೀಸಲಿಟ್ಟಿದ್ದಾರೆ. 

    ಇವರದು ಎಂಟು ಎಕರೆ ಜಮೀನು. ಒಂದು ಎಕರೆಯಲ್ಲಿ ನವಣೆ, ಒಂದು ಎಕರೆಯಲ್ಲಿ ಸಾಮೆ, ಅರ್ಧ ಎಕರೆ ಬರಗು, ಕಾಲೆಕರೆ ಕೊರಲೆ, ಕಾಲೆಕರೆ ಹಾರಕ, ಮೂರು ಎಕರೆ ಸಜ್ಜೆ, ಅರ್ಧ ಎಕರೆ ರಾಗಿ, ಕಾಲು ಎಕರೆ ಊದಲು ಕೃಷಿ ಮಾಡುತ್ತಿದ್ದಾರೆ. ಬಿತ್ತನೆ ಪೂರ್ವ ಭೂಮಿ ಸಿದ್ದತೆಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಮೇ ತಿಂಗಳ ಮೊದಲನೆಯ ವಾರ ಹೊಲದ ತುಂಬಾ ಕುರಿ ಮಂದೆ ತುರುಬಿಸಿದ್ದರು. ಕೊನೆಯ ವಾರ ಟ್ರಾಕ್ಟರ್‌ ನೇಗಿಲು ಹೊಡೆಸಿ ಆಳ ಉಳುಮೆ ಕೈಗೊಂಡರು. ಸಡಿಲಗೊಂಡ ಭೂಮಿಯಲ್ಲಿ ಮಣ್ಣಿನ ಹೆಂಟೆಗಳನ್ನು ಪುಡಿಗಟ್ಟಲು ಕುಂಟೆ ಹೊಡೆಸಿ ಜುಲೈ ಮೊದಲನೆಯ ವಾರ ಬಿತ್ತನೆ ಮಾಡಿದ್ದಾರೆ. 

    ಮೂರು ತಾಳಿನ ಕೂರಿಗೆಯ ಮೂಲಕ ಬಿತ್ತನೆ. ನವಣೆಯ ನಡುವೆ ಅಕ್ಕಡಿಯಾಗಿ ಎಂಟು ಸಾಲಿಗೆ ಒಂದು ಸಾಲಿನಂತೆ ಗುರೆಳ್ಳು ಹಾಗೂ ಸಾಮೆಯ ನಡುವೆ ಅಕ್ಕಡಿಯಾಗಿ ಮಡಿಕೆ ಕಾಳು ಬಿತ್ತನೆ ಕೈಗೊಂಡಿದ್ದರು. ಬಿತ್ತನೆ ಮಾಡಿದ ವಾರದಲ್ಲಿಯೇ ಗಿಡಗಳು ಚಿಗುರಿ ಮೇಲೇಳ ತೊಡಗಿದ್ದವು. ಇಪ್ಪತ್ತನೆಯ ದಿನಕ್ಕೆ ಕುಂಟೆ ಹೊಡೆದು ಕಳೆ ನಿಯಂತ್ರಿಸಿದ್ದಾರೆ. ಇಪ್ಪತ್ತೆ„ದನೆಯ ದಿನಕ್ಕೆ ಗಿಡಗಳ ನಡುವೆ ಉಳಿದುಕೊಂಡಿದ್ದ ಕಳೆಗಳನ್ನು ಕಿತ್ತು ಹಾಕಿದ್ದಾರೆ. ಮೂವತ್ತನೆಯ ದಿನಕ್ಕೆ ಎರಡನೆಯ ಬಾರಿ ಸಾಲಿನ ನಡುವೆ ಕುಂಟೆ ಉಳುಮೆ ಕೈಗೊಂಡಿದ್ದಾರೆ.     ಸಜ್ಜೆಯ ಹೊರತಾಗಿ ಉಳಿದ ಬೆಳೆಗಳಿಗೆ ರಸಗೊಬ್ಬರ ಬಳಕೆ ಮಾಡಿಲ್ಲ. ಮೂರು ಎಕರೆಯಲ್ಲಿ ಸಜ್ಜೆ ಬಿತ್ತುವಾಗಲೇ ಐವತ್ತು  ಕೆಜಿ ಡಿ.ಏ.ಪಿ ಬಳಕೆ ಮಾಡಿದ್ದರು. ಬಿತ್ತಿದ ಒಂದು ತಿಂಗಳ ನಂತರ ಎಕರೆಗೆ ಐವತ್ತು ಕೆಜಿಯಂತೆ ಮೂರು ಎಕರೆಗೆ 150 ಕೆಜಿ ಯೂರಿಯಾ ಹಾಕಿದರು.  ಒಂದೆರಡು ಮಳೆಯಲ್ಲಿಯೇ ಗಿಡಗಳು ಹುಲುಸಾಗಿ ಬೆಳೆದು ನಿಂತಿದ್ದವು. ನವಣೆ ಬೆಳೆ ಬೆಳೆದು ನಿಂತಿದ್ದ ರೀತಿ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. 

 ಇಳುವರಿ ಕೈಸೇರಿದೆ
    ಸಿರಿಧಾನ್ಯಗಳ ಕಟಾವು ಮುಗಿಸಿದ್ದಾರೆ. ನವಣೆ ಏಳು ಕ್ವಿಂಟಾಲ್‌, ಸಾಮೆ ಮೂರು ಕ್ವಿಂಟಾಲ್‌, ಬರಗು, ಕೊರಲೆ, ಹಾರಕ ಒಂದೂವರೆ ಕ್ವಿಂಟಾಲ್‌, ಸಜ್ಜೆ ನಲವತ್ತು ಕ್ವಿಂಟಾಲ್‌, ರಾಗಿ ನಲವತ್ತು ಕ್ವಿಂಟಾಲ್‌, ಊದಲು ಒಂದು ಕ್ವಿಂಟಾಲ್‌ ಇಳುವರಿ ಪಡೆದಿದ್ದಾರೆ. ಸಂಸ್ಕರಣೆಗೊಳಿಸಿದ ಸಿರಿಧಾನ್ಯ ಬೀಜಗಳ ಸಂಗ್ರಹ ಕಾಪಿಟ್ಟುಕೊಂಡಿದ್ದಾರೆ. ವ್ಯಾಪಾರಸ್ಥರಿಗೆ ಮಾರುವ ಆಲೋಚನೆಯಿಂದ ದೂರ ಸರಿದಿದ್ದಾರೆ. ಆಸಕ್ತರಿಗೆ ಬಿತ್ತನೆ ಬೀಜವಾಗಿ ವಿಕ್ರಯಿಸುವ, ಅಗತ್ಯವಿರುವವರಿಗೆ ಅಕ್ಕಿ ತಯಾರಿಸಿ ಮಾರಾಟ ಮಾಡುವ ಗುರಿ ಹೊಂದಿದ್ದಾರೆ. ಇವರ ಹೊಲದಲ್ಲಿನ ಬೆಳೆಯ ಅಬ್ಬರವನ್ನು ಗಮನಿಸಿದ ಹಲವರು ಬೀಜ ನೀಡುವಂತೆ ದುಂಬಾಲು ಬಿದ್ದಿದ್ದಾರೆ. 

Advertisement

    ಕಳೆದ ವರ್ಷ ಬೆಳೆದ ಫ‌ಸಲನ್ನು ಮಾರಾಟ ಮಾಡಿರಲಿಲ್ಲ. ಸಂಪೂರ್ಣ ಮನೆ ಬಳಕೆಗೆ ನಿಯೋಗಿಸಿದ್ದಾರೆ. ವಾರದಲ್ಲಿ ನಾಲ್ಕು ದಿನವಾದರೂ ಇವರಿಗೆ ಸಿರಿಧಾನ್ಯಗಳ ಅಡುಗೆ ಇರಲೇ ಬೇಕು. ಬೆಳಗಿನ ಉಪಾಹಾರಕ್ಕಾಗಿ ಸಿರಿಧಾನ್ಯಗಳ ಇಡ್ಲಿ, ದೋಸೆ, ಉಪ್ಪಿಟ್ಟು, ಚಿತ್ರಾನ್ನ, ಪಲಾವ್‌ ಮತ್ತಿತರ ಆಹಾರ ಪದಾರ್ಥ ತಯಾರಿಸಿಕೊಳ್ಳುತ್ತಾರೆ. ಬಗೆ ಬಗೆಯ ಧಾನ್ಯಗಳ ಅನ್ನ ಬಳಕೆ ನಿರಂತರ. ತಾವು ಬಳಕೆ ಮಾಡುವುದಲ್ಲದೇ ಇತರರಿಗೂ ಸಿರಿಧಾನ್ಯಗಳ ಮಹತ್ವ ಅರಿಕೆ ಮಾಡಿಕೊಡುತ್ತಿದ್ದಾರೆ. ಪರಿಣಾಮ ಬೆಳೆದ ಬೆಳೆ ಮಾರಾಟದ ಭಾಗ್ಯ ಗಿಟ್ಟಿಸಿಕೊಳ್ಳುತ್ತಿದೆ. ಏಳು ಎಕರೆ ಸಿರಿಧಾನ್ಯಗಳ ಕೃಷಿಗೆ ಇವರು ಖರ್ಚು ಮಾಡಿದ ಮೊತ್ತ ಇಪ್ಪತ್ತೆ„ದು ಸಾವಿರ ರೂ. ಮಾತ್ರ.  ಆದಾಯ ಎರಡು ಲಕ್ಷ ಮೀರಿದೆ.
ಸಂಪರ್ಕಿಸಲು: 9611962912

ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next