Advertisement

ಉಡುಪಿ ಜಿಲ್ಲೆಯ ಇನ್ನೋರ್ವ ವಿದ್ಯಾರ್ಥಿಗೆ ಪೂರ್ಣಾಂಕ

12:31 AM May 22, 2022 | Team Udayavani |

ಉಡುಪಿ: ಉಡುಪಿ ಒಳಕಾಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕೇದಾರ್‌ ನಾಯಕ್‌ ಕೆ. ಅವರಿಗೆ ಎಸೆಸೆಲ್ಸಿಯಲ್ಲಿ 625ಕ್ಕೆ 625 ಅಂಕ ಲಭಿಸಿದೆ.

Advertisement

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮೇ 19ರಂದು ಶಾಲೆಗೆ ಬಂದಿರುವ ಫ‌ಲಿತಾಂಶ ಪಟ್ಟಿಯಲ್ಲಿ ಈ ವಿದ್ಯಾರ್ಥಿಯ ಹೆಸರು ಇರಲಿಲ್ಲ. ಆನ್‌ಲೈನ್‌ ಮೂಲಕ ಪರಿಶೀಲಿಸಿದಾಗಲೂ ಈ ವಿದ್ಯಾರ್ಥಿಯ ಫ‌ಲಿತಾಂಶ ತೋರುತ್ತಿರಲಿಲ್ಲ. ಈ ಸಂಬಂಧ ಮಂಡಳಿಗೆ ಕರೆ ಮಾಡಿ, ವಿಚಾರಿಸಿದಾಗ ತಾಂತ್ರಿಕ ದೋಷದಿಂದಾಗಿ ಫ‌ಲಿತಾಂಶವನ್ನು ನಿರ್ದಿಷ್ಟ ಸಮಯದಲ್ಲಿ ನೀಡಲು ಸಾಧ್ಯವಾಗಿಲ್ಲ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಕೇದಾರ್‌ ಅವರ ಫ‌ಲಿತಾಂಶ ಮಂಡಳಿಯಿಂದ ಶಾಲೆಗೆ ಬಂದಿದ್ದು, 625ಕ್ಕೆ 625 ಅಂಕ ಪಡೆದಿದ್ದಾನೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ನಿರ್ಮಲಾ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಜಿಲ್ಲೆಯ ಐವರು ವಿದ್ಯಾರ್ಥಿಗಳು ಪೂರ್ಣ ಅಂಕ ಪಡೆದು ವಿಶೇಷ ಸಾಧನೆ ಮಾಡಿದ್ದರು. ಆ ಸಾಲಿಗೆ ಈಗ ಒಳಕಾಡು ಶಾಲೆಯ ವಿದ್ಯಾರ್ಥಿ ಕೇದಾರ್‌ ಕೂಡ ಸೇರಿಕೊಂಡಿದ್ದಾರೆ. ಇವರು ಉಡುಪಿಯ ಉದ್ಯಮಿ ಕೆ. ಉಮೇಶ್‌ ನಾಯಕ್‌ ಮತ್ತು ಕೆ. ರಶ್ಮಿ ನಾಯಕ್‌ ದಂಪತಿ ಪುತ್ರ.

ಲೆಕ್ಕಪರಿಶೋಧಕನಾಗುವ ಆಸೆ
ಪರೀಕ್ಷೆಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಬರೆದು ಉತ್ತಮ ಅಂಕದ ನಿರೀಕ್ಷೆಯಲ್ಲಿದ್ದೆ. 625ಕ್ಕೆ 625 ಅಂಕ ಬಂದಿರುವುದು ಹೆಚ್ಚು ಖುಷಿ ಕೊಟ್ಟಿದೆ. ಮುಂದೆ ಲೆಕ್ಕಪರಿಶೋಧಕ (ಸಿಎ) ಅಗಬೇಕು ಎಂಬ ಕನಸಿದೆ ಎಂದು ಕೇದಾರ್‌ ನಾಯಕ್‌ ಸಂತಸ ಹಂಚಿಕೊಂಡರು.

Advertisement

ಪರೀಕ್ಷೆ ಆರಂಭದಿಂದಲೇ ಸಿದ್ಧತೆ ಮಾಡಿಕೊಂಡಿದ್ದೆ. ಯಾವುದೇ ವಿಷಯದಲ್ಲಿ ಸಂಶಯ, ಗೊಂದಲ ಎದುರಾದಲ್ಲಿ ಅಂದೇ ಶಿಕ್ಷಕರಲ್ಲಿ ಕೇಳುತ್ತಿದ್ದೆ. ಕುಟುಂಬದವರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗದರ್ಶದಿಂದ ಈ ಸಾಧನೆ ಸಾಧ್ಯವಾಗಿದೆ. ನಿರಂತರ ಪರಿಶ್ರಮ ಹಾಗೂ ಶ್ರದ್ಧೆಯಿಂದ ಓದಿದರೆ ಎಲ್ಲವೂ ಸಾಧ್ಯವಿದೆ ಎಂದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next