ಬೀದರ್ : ಕಾಂಗ್ರೆಸ್‌ನ ‘ಪೇ ಸಿಎಂ’ ಅಭಿಯಾನ ಲಿಂಗಾಯತ ಮುಖ್ಯಮಂತ್ರಿಗೆ ಅಪಮಾನ ಮಾಡುವ ಷಡ್ಯಂತ್ರ ಎಂದು ಬಿಜೆಪಿ ಬಿಂಬಿಸುತ್ತಿರುವುದು ಖಂಡನೀಯವಾಗಿದ್ದು, ಆ ಮೂಲಕ ಜಾತಿ ಹೆಸರಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ಬಿಜೆಪಿಯಲ್ಲಿರುವ ಲಿಂಗಾಯತರನ್ನು ಪಕ್ಷ ಹೇಗೆ ನಡೆದುಕೊಳ್ಳುತ್ತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ತನ್ನ ದುರಾಡಳಿತಕ್ಕೆ ಕಡಿವಾಣ ಹಾಕುವ ಬದಲು ಜಾತಿಯನ್ನು ಒಳತರುತ್ತಿದೆ. ಕಾಂಗ್ರೆಸ್‌ನ ಅಭಿಯಾನ ಸಿಎಂಗೆ ಅಪಮಾನ ಎಂದು ಹೇಳುತ್ತಿರುವ ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಜೈಲಿಗೆ ಕಳುಹಿಸುವಾಗ, ವಯಸ್ಸಾಗಿದೆ ಎಂದು ಕಣ್ಣೀರು ಹಾಕಿ ಅವರನ್ನು ರಾಜೀನಾಮೆ ಕೊಡಿಸುವಾಗ, ಅಷ್ಟೇ ಅಲ್ಲ ಮಠ್ಯ ಮಾನ್ಯಗಳಿಗೆ ಅನುದಾನ ಬಿಡುಗಡೆಗಾಗಿ ಕಮಿಷನ್ ನೀಡಬೇಕಾಗುತ್ತದೆ ಎಂದು ಒಬ್ಬರು ಸ್ವಾಮೀಜಿ ಆರೋಪಿಸಿದಾಗ ಲಿಂಗಾಯತರಿಗೆ ಅವಮಾನ ಆಗಿದೆ ಎಂದು ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕಲಬುರಗಿ: ಹತ್ತು ತಜ್ಞ ವೈದ್ಯರಿಂದ ಸಿಪಿಐ ಶ್ರೀಮಂತ ಇಲ್ಲಾಳಗೆ ಚಿಕಿತ್ಸೆ
‘ಪೇ ಸಿಎಂ’ ಅಭಿಯಾನ ಭ್ರಷ್ಟಾಚಾರದ ವಿರುದ್ಧ ಹೋರಾಟವೇ ಹೊರತು ಯಾವುದೇ ಜಾತಿ, ಮತ ಮತ್ತು ಧರ್ಮದ ವಿರುದ್ಧವಲ್ಲ. ಸ್ವಚ್ಛ ಕರ್ನಾಟಕ ನಿರ್ಮಾಣ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ಆಡಳಿತ ನೀಡಬೇಕು ಎಂಬುದೇ ನಮ್ಮ ಪಕ್ಷದ ಆಶಯವಾಗಿದೆ ಎಂದು ಸ್ಪಷ್ಟಪಡಿಸಿದ ಖಂಡ್ರೆ, ಇಂದು ಗ್ರಾ.ಪಂ ವಿಕಾಸ ಸೌಧದವರೆಗೆ ಯಾವುದೇ ಕೆಲಸ, ಕಾಮಗಾರಿಗಳಿಗಾಗಿ ಪ್ರತಿ ಕ್ಷೇತ್ರ, ಇಲಾಖೆಯಲ್ಲಿ ಬಡ ಜನರು, ರೈತರಿಗೆ ಶೋಷಣೆ ಆಗುತ್ತಿದೆ. ಪ್ರತಿ ನೇಮಕಾತಿಯಲ್ಲಿ ಭ್ರಷ್ಟಾಚಾರ, ಗುತ್ತಿಗೆದಾರ ಸಂಘದ ಅಧ್ಯಕ್ಷರು ಕಮಿಷನ್ ಆರೋಪ ಪ್ರಧಾನಿಗೆ ಪತ್ರ ಬರೆದರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಇದರ ವಿರುದ್ಧ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ನಡೆಸುತ್ತಿದೆ ಎಂದರು.
ಬಿಜೆಪಿಯ ಕಾಲ ಈಗ ಮುಗಿದಿದ್ದು, ಮತ್ತೆ ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ನಮ್ಮ ಪಕ್ಷದ ಯಾವುದೇ ನಾಯಕರು ಬಿಜೆಪಿಗೆ ಹೋಗುವುದಿಲ್ಲ. ಇನ್ನೂ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ ಜೋಡೋ’ ಯಾತ್ರೆ ರಾಜ್ಯದಲ್ಲಿ 511ಕಿ.ಮೀ ಸಂಚರಿಸಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 4 ದಿನ ನಡೆಯುವ ಯಾತ್ರೆ ಪ್ರಯುಕ್ತ ಬಳ್ಳಾರಿ ಮತ್ತು ರಾಯಚೂರಿನಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದ್ದು, ಜಿಲ್ಲೆಯಿಂದ ಸಾವಿರಾರು ಜನ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಾಜಶೇಖರ ಪಾಟೀಲ್ , ರಹೀಮ್ ಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮತ್ತು ಮೀನಾಕ್ಷಿ ಸಂಗ್ರಾಮ್ ಇದ್ದರು.