ಮುಂಬಯಿ: ಭಾರತೀಯ ಸೇನೆಯ ಯೋಧರ ಪತ್ನಿಯರ ಬಗೆಗೆ ಆಕ್ಷೇಪಕಾರಿ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೀಡಾಗಿದ್ದ ರಾಜ್ಯ ವಿಧಾನಪರಿಷತ್‌ನಲ್ಲಿನ ಬಿಜೆಪಿ ಬೆಂಬಲಿತ ಸದಸ್ಯ ಪ್ರಶಾಂತ್ ಪರಿಚಾರಕ್ ಅವರನ್ನು ಒಂದೂವರೆ ವರ್ಷಗಳ ಕಾಲ ಸದನದಿಂದ ಅಮಾನತುಗೊಳಿಸಲಾಗಿದೆ.
ಪ್ರಶಾಂತ್ ಪರಿಚಾರಕ್ ಅವರು ನೀಡಿರುವ ರೆನ್ನಲಾಗಿರುವ ವಿವಾದಾತ್ಮಕ ಹೇಳಿಕೆಯ ಸಂಬಂಧ ಪರಿಷತ್‌ನ ಸಭಾಪತಿ ರಾಮರಾಜೇ ನಿಂಬಾಳ್ಕರ್ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ ಎಂದು ವಿಧಾನ ಪರಿಷತ್‌ನ ನಾಯಕರಾದ ಚಂದ್ರಕಾಂತ ಪಾಟೀಲ್ ಪ್ರಕಟಿಸಿದರು.
ಪ್ರಶಾಂತ್ ಪರಿಚಾರಕ್ ಅವರ ಅಮಾನತಿಗೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಸದನ ದಲ್ಲಿ ವಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದಾಗಿ ಕಲಾಪ ವನ್ನು ಮುಂದೂಡುತ್ತಲೇ ಬರಲಾಗಿತ್ತು.
ಪ್ರಶಾಂತ್ ಪರಿಚಾರಕ್ ಅವರು ಸೇನಾ ಯೋಧರ ಕುರಿತಂತೆ ನೀಡಿರುವ ಹೇಳಿಕೆಯು ತೀರಾ ಅಕ್ಷೇಪಕಾರಿ ಮತ್ತು ಮಹಿಳೆಯರಿಗೆ ಅಪಮಾನ ಉಂಟುಮಾಡುವಂತಹ ಹೇಳಿಕೆ ಯಾಗಿದ್ದು ಇದು ಸದನದ ಘನತೆಗೆ ಕುಂದುಂಟುಮಾಡಿರುವುದರಿಂದ ತನಿಖೆ ಪೂರ್ಣಗೊಳ್ಳುವವರೆಗೆ ಪರಿಚಾರಕ್ ಅವರನ್ನು ಸದನದಿಂದ ಅಮಾನತು ಗೊಳಿಸಲಾಗುವುದು ಎಂದು ಸಚಿವ ಚಂದ್ರಕಾಂತ ಪಾಟೀಲ್ ತಿಳಿಸಿದರು.
ಚುನಾವಣಾ ಪ್ರಚಾರದ ವೇಳೆ ಪ್ರಶಾಂತ್ ಪರಿಚಾರಕ್ ಅವರು ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.
ಯೋಧರು ತಮಗೆ ಮಗು ಜನಿಸಿದ ಸಂತಸದಲ್ಲಿ ಪಂಜಾಬ್ ಗಡಿ ಯಲ್ಲಿ ಸಿಹಿಯನ್ನು ಹಂಚುತ್ತಾರೆ. ಆದರೆ ಅವರು ವರ್ಷವಿಡೀ ಮನೆಗೆ ತೆರಳಿರುವುದಿಲ್ಲ ಎಂಬ ಅವರ ಹೇಳಿಕೆ ತೀವ್ರ ವಿವಾದಕ್ಕೀಡಾದ ಬಳಿಕ ಪರಿಚಾರಕ್ ತಮ್ಮ ಹೇಳಿಕೆಗಾಗಿ ಕ್ಷಮೆ ಯಾಚಿಸಿದ್ದರು.