ಬೆಂಗಳೂರು: ಗಣರಾಜ್ಯೋತ್ಸವದ ಸ್ತಬ್ಧಚಿತ್ರ ವಿಚಾರ ಮತ್ತೆ ಚರ್ಚೆಗೆ ಬಂದಿದ್ದು, ಈ ಬಾರಿಯೂ ರಾಜ್ಯವನ್ನು ಕಡೆಗಣಿಸಿ,ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಂಗಳವಾರ ಆಕ್ರೋಶ ಹೊರ ಹಾಕಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ” ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ. ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ ಅನುಮತಿ ನೀಡಿತ್ತು, ಈ ಬಾರಿ ಮತ್ತೆ ಕನ್ನಡಿಗರನ್ನು ಅವಮಾನಿಸುವ ತನ್ನ ಚಾಳಿಯನ್ನು ಮುಂದುವರೆಸಿದೆ ಎಂದು ಪೋಸ್ಟ್ ಮಾಡಿದ್ದಾರೆ.
ನವಕರ್ನಾಟಕದ ಅಭಿವೃದ್ಧಿಯ ದೃಷ್ಠಾರ, ಸಾಮಾಜಿಕ ನ್ಯಾಯದ ಹರಿಕಾರ, ನೀರಾವರಿ, ಬ್ಯಾಂಕಿಂಗ್, ಮೂಲಸೌಕರ್ಯದ ಕ್ಷೇತ್ರಗಳ ಅಭಿವೃದ್ದಿಯ ಮೂಲಕ ಮೈಸೂರನ್ನು ಒಂದು ಮಾದರಿ ರಾಜ್ಯವಾಗಿ ಕಟ್ಟಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸ್ತಬ್ಧಚಿತ್ರ, ನೆಲದ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗಗೈದ ಅಪ್ರತಿಮ ದೇಶಪ್ರೇಮಿ ರಾಣಿ ಚೆನ್ನಮ್ಮ ಅವರ ಸ್ತಬ್ಧಚಿತ್ರ, ಕರುನಾಡಿನ ಪ್ರಾಕೃತಿಕ ಸೌಂದರ್ಯ ಮತ್ತು ಬ್ರಾಂಡ್ ಬೆಂಗಳೂರು ಹೀಗೆ 4 ಸ್ತಬ್ಧಚಿತ್ರ ಮಾದರಿಗಳಿಗೆ ಅವಕಾಶ ಕೋರಿ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರದ ಆಯ್ಕೆ ಸಮಿತಿಯು ನಮ್ಮ ಮನವಿಯನ್ನು ತಿರಸ್ಕರಿಸಿ, ನಾಡಿನ ಅಸೀಮ ಸಾಧನೆ ಮತ್ತು ಮಾದರಿ ಸಾಧಕರನ್ನು ದೇಶಕ್ಕೆ ಪರಿಚಯಿಸುವ ಅವಕಾಶವನ್ನು ಕಸಿದುಕೊಂಡಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ತೆರಿಗೆ ಪಾಲಿನಲ್ಲಿ ವಂಚನೆ, ಬರಪರಿಹಾರದಲ್ಲಿ ಅನ್ಯಾಯ, ಕನ್ನಡಿಗರು ಕಟ್ಟಿರುವ ಬ್ಯಾಂಕು, ಬಂದರು, ವಿಮಾನ ನಿಲ್ದಾಣಗಳ ಮಾರಾಟ ಹೀಗೆ ಹೆಜ್ಜೆಹೆಜ್ಜೆಗೂ ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಪ್ರಹಾರ ಮಾಡುತ್ತಿದೆ. ಇದರ ಜೊತೆಗೆ ಈಗ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಅವಕಾಶ ನಿರಾಕರಿಸಿ ನಮ್ಮ ಅಸ್ಮಿತೆಯ ಮೇಲೆ ದಾಳಿಗೆ ಇಳಿದಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡ-ಕನ್ನಡಿಗ ಮತ್ತು ಕರ್ನಾಟಕಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದಿಂದ ಕನ್ನಡಿಗರು ಈಗಾಗಲೇ ರೋಸಿಹೋಗಿದ್ದಾರೆ. ಅವರ ತಾಳ್ಮೆಯನ್ನು ಪರೀಕ್ಷಿಸಲು ಕೇಂದ್ರ ಸರ್ಕಾರ ಹೋಗಬಾರದು.ಈಗಲೂ ಕಾಲ ಮಿಂಚಿಲ್ಲ, ಕೇಂದ್ರ ಸರ್ಕಾರ ತಕ್ಷಣ ತನ್ನ ತಪ್ಪನ್ನು ತಿದ್ದಿಕೊಂಡು ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಂಡು ದೇಶದ ಹೆಮ್ಮೆಯ ಗಣರಾಜ್ಯೋತ್ಸವ ಪರೇಡ್ ನ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ನಮಗೆ ಅವಕಾಶ ನೀಡಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದು ಕಿಡಿ ಕಾರಿದ್ದಾರೆ.