Advertisement

ಸಂತ್ರಸ್ತರಿಗೆ ಸರ್ಕಾರಿ ದಾಖಲೆ ನೀಡಲು ಸೂಚನೆ

12:32 AM Dec 11, 2019 | Lakshmi GovindaRaj |

ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಆಧಾರ್‌ ಕಾರ್ಡ್‌, ಮತದಾನ ಗುರುತಿನ ಚೀಟಿ ಸೇರಿ ಇತರೆ ಸರ್ಕಾರಿ ದಾಖಲೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಶಿಬಿರ ನಡೆಸಿ ದಾಖಲೆಗಳನ್ನು ಕೊಡಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿ ಸೂಚನೆ ನೀಡಿದ್ದಾರೆ.

Advertisement

ಹುಳಿಮಾವು ಕೆರೆ ಅನೈರ್ಮಲ್ಯ ಹಾಗೂ ಕೆರೆ ಕೋಡಿ ಒಡೆದು ಉಂಟಾದ ಅನಾಹುತ ಸಂಬಂಧ ದಾಖಲಾದ ದೂರುಗಳನ್ನು ಮಂಗಳ ವಾರ ಲೋಕಾಯುಕ್ತರು ವಿಚಾರಣೆ ನಡೆಸಿ ಈ ಬಗ್ಗೆ ಸೂಚನೆ ನೀಡಿದರು. ಕೆರೆ ಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿದ್ದರಿಂದ ಸಾಕಷ್ಟು ಮಂದಿ ಆಧಾರ್‌ ಕಾರ್ಡ್‌, ಮತದಾನ ಗುರುತಿನ, ಪಡಿತರ ಚೀಟಿ ಕಳೆದು ಕೊಂಡಿದ್ದಾರೆ. ಹೊಸದಾಗಿ ದಾಖಲೆಗಳನ್ನು ಕೊಡಿ ಸಲು ಮುಂದಿನ 15 ದಿನಗಳಲ್ಲಿ ಸಕ್ಷಮ ಪ್ರಾಧಿ ಕಾರಗಳ ಜತೆ ಚರ್ಚಿಸಿ ಅಲ್ಲಿಯೇ ಒಂದು ಶಿಬಿರ ನಡೆಸಿ ದಾಖಲೆ ವಿತರಿಸಿ ಎಂದು ಸೂಚಿಸಿದ್ದು. ಈ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಆದೇಶಿಸಿ ಫೆ. 15ಕ್ಕೆ ವಿಚಾರಣೆ ಮುಂದೂಡಿದ್ದಾರೆ.

ವಿಚಾರಣೆ ವೇಳೆ ಕೆರೆಕೋಡಿ ಒಡೆದ ಪರಿಣಾಮ ಸಂತ್ರಸ್ತರಾದವರಿಗೆ ಪರಿಹಾರ ವಿತರಣೆ, ಅವರಿಗೆ ಕಲ್ಪಿಸಲಾಗಿರುವ ಮೂಲಸೌಲಭ್ಯಗಳು ಸೇರಿ ಇನ್ನಿತರೆ ವಿಚಾರಗಳ ಬಗ್ಗೆ ವಸ್ತುಸ್ಥಿತಿ ವರದಿಯನ್ನು ಪಾಲಿಕೆ ಅಧಿಕಾರಿಗಳಿಂದ ಲೋಕಾಯುಕ್ತರು ಪಡೆದುಕೊಂಡರು. ಕೆರೆಕೋಡಿ ಒಡೆದ ದುರಂತಕ್ಕೆ ಕಾರಣವಾದವರು ಯಾರು ಎಂಬುದರ ಬಗ್ಗೆ ಪೊಲೀಸ್‌ ತನಿಖೆ ಚುರುಕಾಗುವಂತೆ ಅವರ ಜತೆ ತನಿಖೆಗೆ ಸಹಕರಿಸಿ, ಅವರಿಂದ ಮಾಹಿತಿ ಪಡೆದುಕೊಳ್ಳಿ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಅಷ್ಟೇ ಅಲ್ಲದೆ, ಸಂತ್ರಸ್ತರಿಗೆ ನೀಡಲಾಗುವ ಪರಿಹಾರದಲ್ಲಿ ತಾರತಮ್ಯ ಆಗಬಾರದು. ಅನುದಾನ ಕೂಡ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಸ್ಥಳೀಯ ನಿವಾಸಿಗಳ ಆರೋಗ್ಯದ ಕಡೆಯೂ ಹೆಚ್ಚು ಗಮನಹರಿಸಿ ಎಂದು ಸಲಹೆ ನೀಡಿದರು. ವಿಚಾರಣೆ ವೇಳೆ ದೂರುದಾರರಾದ ಯುನೈಟಡ್‌ ಬೆಂಗಳೂರು ಸಂಸ್ಥೆಯ ಅಧ್ಯಕ್ಷರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿ, ಸಂಚಾಲಕರಾದ ಎನ್‌. ಆರ್‌ ಸುರೇಶ್‌, ನಮ್ಮ ಬೆಂಗಳೂರು ಫೌಂಡೇಶನ್‌ನ ಲಕ್ಷ್ಮೀಕಾಂತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next