ಬಾದಾಮಿ: ಅಂಗವಿಕಲ ಮಕ್ಕಳೂ ಸಹಿತ ಇತರ ಮಕ್ಕಳಂತೆ ಸಮಾನರು. ಇವರಿಗೆ ಸೌಲಭ್ಯಗಳನ್ನು ಕೊಡುವುದರ ಜತೆಗೆ ಆತ್ಮಸ್ಥೈರ್ಯ ತುಂಬಬೇಕಿದೆ ಎಂದು ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾ ಧಿಕಾರಿ ಎಸ್.ಕೆ.ಕಲ್ಲೂರ ಹೇಳಿದರು.
ಕಬ್ಬಲಗೇರಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪದನಿಮಿತ್ತ ತಾಲೂಕು ಯೋಜನಾ ಸಮನ್ವಯಾ ಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಅಂಗವಿಕಲರಿಗೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಶಿಕ್ಷಣ ಇಲಾಖೆಯೂ ಸೇರಿದಂತೆ ಇತರ ಇಲಾಖೆಯ ಯೋಜನೆ ತಲುಪಿಸುವುದರ ಜತೆಗೆ ಶಿಕ್ಷಕರು ಆತ್ಮಸ್ಥೈರ್ಯ ತುಂಬಬೇಕಿದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾ ಧಿಕಾರಿ ಎಸ್.ವೈ. ಮಡಿವಾಳರ ಮಾತನಾಡಿ, ಸಮಗ್ರ ಶಿಕ್ಷಣ ಯೋಜನೆಯಡಿ ವಿಕಲಚೇತನ ಮಕ್ಕಳಿಗೆ ವೈದ್ಯಕೀಯ ಶಿಬಿರ, ಸಾಧನ ಸಲಕರಣೆ ವಿತರಣೆ, ಶಿಕ್ಷಕರಿಗೆ ತರಬೇತಿ, ಪಿಜಿಯೋಥೆರಪಿ ಸೇರಿದಂತೆ ಅನೇಕ ಯೋಜನೆಗಳಿಗೆ ಅವುಗಳನ್ನು ಮಕ್ಕಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಶಿಕ್ಷಕರು ಕಾಳಜಿ ತೋರುವ ಮೂಲಕ ಎಲ್ಲ ಮಕ್ಕಳಿಗೂ ಸಮಾನ ಅವಕಾಶ ತಲುಪಿಸಲಾಗುತ್ತಿದೆ ಎಂದು ಹೇಳಿದರು.
ಪ್ರೌಢಶಾಲಾ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಿ.ಬಿ.ಹಡಗಲಿ ಮಾತನಾಡಿದರು. ಸ್ಥಳೀಯ ಶಾಲೆಯ ಮುಖ್ಯಶಿಕ್ಷಕ ವೈ.ಎಫ್.ಶರೀಫ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರವಿ ಕಂಗಳ, ಬಿ.ಎಫ್. ಕುಂಬಾರ, ಹಲಕುರ್ಕಿ ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ ಕೋಟನಕರ, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಎನ್.ಡಿ.ಬೀಳಗಿ, ಎಚ್.ಆರ್.ಕಡಿವಾಲ, ಎಸ್‌ಡಿಎಂಸಿ ಸದಸ್ಯ ಭೀಮಪ್ಪ ತಳವಾರ ಹಾಜರಿದ್ದರು.
ಜಿಲ್ಲಾ ಯೋಜನಾ ಸಹಾಯಕ ಸಮನ್ವಯಾಧಿಕಾರಿ ಎಸ್.ಕೆ. ಕಲ್ಲೂರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ವೈ. ಮಡಿವಾಳರ ಮತ್ತು ಸ್ಥಳೀಯ ಶಾಲೆ ವಿಕಲಚೇತನ ಶಿಕ್ಷಕ ಎಸ್.ಎಸ್. ಕಂಬಾಳಿಮಠ, ಅಂತಾರಾಷ್ಟ್ರೀಯ ವಿಕಲಚೇತನ ಕ್ರೀಡಾಪಟು ಸಿದ್ದಾರೂಢ ಕೊಪ್ಪದ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಾಲ್ಕು ಜನ ವಿಕಲಚೇತನ ವಿದ್ಯಾರ್ಥಿಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು.
ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಎಸ್.ಎಸ್. ಚೌಕದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕರಾದ ಈರಣ್ಣ ಹಲಗಲಿ ಸ್ವಾಗತಿಸಿದರು. ಶಿವಯೋಗಿ ಕುಂಬಾರ ನಿರೂಪಿಸಿದರು. ಕೆ.ಎಸ್. ಮಸಬಿನಾಳ ವಂದಿಸಿದರು. ಶಾಲಾ ಮಕ್ಕಳು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಜರಿದ್ದರು.