Advertisement

ಪ್ರತಿಭಟನೆ ಬದಲು ಕೇಂದ್ರಕ್ಕೆ ಡ್ಯಾಂ ನೀರಿನ ಸ್ಥಿತಿಗತಿ ತಿಳಿಸಿ

09:14 PM Jun 25, 2019 | Lakshmi GovindaRaj |

ಮೈಸೂರು: ನಮ್ಮ ಸಂಸದರು ಕಾವೇರಿ ಜಲಾನಯನ ಪ್ರದೇಶದಿಂದ ತಮಿಳುನಾಡಿಗೆ ನೀರು ಬಿಡದಂತೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಮನವಿ ಮಾಡಿದೆ.

Advertisement

ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಮಂಗಳವಾರ ನಡೆದ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಪ್ರಮುಖ ಎಂಜಿನಿಯರುಗಳ ಚರ್ಚಿಸಿ ಮುಂದಿನ ಮೂರು ದಿನಗಳೊಳಗೆ ಕರಡು ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದು ಮತ್ತು ರಾಜ್ಯದ 25 ಮಂದಿ ಬಿಜೆಪಿ ಸಂಸದರು, ಓರ್ವ ಪಕ್ಷೇತರ ಸಂಸದೆ ಹಾಗೂ ಓರ್ವ ಕಾಂಗ್ರೆಸ್‌, ಜೆಡಿಎಸ್‌ ಸಂಸದರಿಗೆ ಕರಡು ಕಳುಹಿಸುವುದರ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಲಾಯಿತು.

ಎಸಿಐಎಂಸಿ ಸಂಚಾಲಕ ಎಂ. ಲಕ್ಷ್ಮಣ್‌ ಮಾತನಾಡಿ, ಕಾವೇರಿ ನಿರ್ವಹಣಾ ಮಂಡಳಿ ನಡೆಸಿದ ಸಭೆಯು ಕಳೆದ ಮೇ 25 ರಂದು 9.19 ಟಿಎಂಸಿ ನೀರು ಬಿಡಲು ನಿರ್ಧರಿಸಿತ್ತು. ಕಳೆದ ತಿಂಗಳೂ ಸಭೆ ನಡೆಸಿದಾಗ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿ, ಮಳೆ ಆರಂಭವಾಗದ್ದರಿಂದ ಹಾಲಿ ಜಲಾಶಯದ ಪ್ರಮಾಣ, ಕುಡಿಯುವ ನೀರಿಗೆ ಬೇಕು. ಮಳೆ ಶುರುವಾದ ಮೇಲೆ ಎಲ್ಲಾ ಜಲಾಶಯಗಳಿಗೆ ಒಳ ಹರಿವು ಜಾಸ್ತಿ ಆದರೆ ಬಿಡುತ್ತೇವೆ ಎಂದಿತ್ತು.

ಜಲಾಶಯ ಪರಿಶೀಲಿಸಿ: ಭಾರತೀಯ ಹವಮಾನ ಇಲಾಖೆಯವರ ಅಭಿಪ್ರಾಯ ಪಡೆದು “ಜೂ. 2 ರಿಂದ ಮುಂಗಾರು ಆರಂಭವಾಗುತ್ತೆ. ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜಲಾಶಯಗಳಿಗೆ ಒಳ ಹರಿವು ಜಾಸ್ತಿಯಾಗುತ್ತೆ. ಒಳ ಹರಿವು ಹೆಚ್ಚಾದ ಮೇಲೆ ನೀರು ಬಿಡುವಂತೆ’ ಸೂಚಿಸಿತ್ತು. ಕೇಂದ್ರದಿಂದ ತಾಂತ್ರಿಕ ಸಮಿತಿಯನ್ನು ಜಲಾಶಯ ಪರಿಶೀಲಿಸಿ, ವರದಿ ಸಲ್ಲಿಸಿದ್ದರಿಂದ ಇವತ್ತು ಸಭೆ(ಮಂಗಳವಾರ) ನಡೆಸಿ, ಕೆಆರ್‌ಎಸ್‌ ಒಳಹರಿವು ಹೆಚ್ಚಾದರೆ ನೀರು ಬಿಡುವಂತೆಯೂ ಹಾಗೂ ಮುಂಗಾರು ತಡವಾದ್ದರಿಂದ ಜುಲೈ ಮೊದಲ ವಾರದಲ್ಲಿ ಮತ್ತೂಮ್ಮೆ ಸಭೆ ನಡೆಸಲು ನಿರ್ಧರಿಸಿದೆ ಎಂದರು.

ಪ್ರತಿಭಟನೆ ಸಲ್ಲ: ಹಳೇ ಮೈಸೂರು ಪ್ರಾಂತ್ಯಕ್ಕೆ ತಾತ್ಕಾಲಿಕವಾಗಿ ಪರಿಹಾರ ಸಿಕ್ಕರೂ ನಾಲ್ಕು ಜಲಾಶಯದಲ್ಲಿರುವ 13 ಟಿಎಂಸಿ ನೀರು 20 ದಿನಗಳಲ್ಲಿ 4.5 ಟಿಎಂಸಿಯನ್ನು ಕುಡಿಯಲು ಬಳಸಬೇಕು. ಹೀಗಾಗಿ ಹಾಸನ, ಮೈಸೂರು, ಬೆಂಗಳೂರು, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು ಜಿಲ್ಲೆಗಳ ಹಿತದೃಷ್ಟಿಯಿಂದ ಯಾವ ಕಾರಣಕ್ಕೂ ನೀರು ಬಿಡಬಾರದು.

Advertisement

ಆದರೆ, ಎಲ್ಲಾ ಕಾವೇರಿ ಜಲಾನಯನ ಪ್ರದೇಶಗಳು 2018 ಜೂನ್‌ ರಿಂದಲೇ ಕಾವೇರಿ ನಿರ್ವಹಣಾ ಮಂಡಳಿ ವ್ಯಾಪ್ತಿ ಹಾಗೂ ಕೇಂದ್ರ ಜಲ ಆಯೋಗ ವ್ಯಾಪ್ತಿಗೆ ಬರುತ್ತದೆ. ನಮ್ಮ ಕೈಯಲ್ಲಿ ಏನು ಇಲ್ಲ. ನೀರು ಬಿಡಬೇಕಾದ್ದರಿಂದ ನಂತರ ನಾವು ಪ್ರತಿಭಟಿಸುವುದರಲಿ ಪ್ರಯೋಜನವಿಲ್ಲ. ಬದಲಾಗಿ ಕೇಂದ್ರ ಸಚಿವ ನಿತಿನ್‌ ಗಡ್ಕರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು ಒಳಿತು ಎಂದರು.

ರಾಜ್ಯಕ್ಕೆ ಅಧಿಕಾರವಿಲ್ಲ: ನಿವೃತ್ತ ಮೇಜರ್‌ ಜನರಲ್‌ ಎಸ್‌.ಜಿ. ಒಂಬತೆRರೆ ಮಾತನಾಡಿ, ಕಾವೇರಿ ನದಿ ಈಗಾಗಲೇ ಬತ್ತಿದ್ದು, ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿದಿದೆ. ಈವರೆಗೂ ಮಳೆ ಬೀಳದೆ ಇರುವುದರಿಂದ ಕುಡಿಯುವ ನೀರಿಗೆ ಮತ್ತಷ್ಟು ತೊಂದರೆಯಾಗುವ ಸಾಧ್ಯತೆಯೂ ಇದೆ.

ಈ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ನಡುವೆ ತಮಿಳುನಾಡು ಸರ್ಕಾರ ನೀರು ಹರಿಸುವಂತೆ ಒತ್ತಾಯಿಸಿದೆ. ಕಾವೇರಿ ನೀರು ನಿರ್ವಹಣ ಮಂಡಳಿ ತೀರ್ಮಾನದಂತೆ ಕೆಆರ್‌ಎಸ್‌ ಆಣೆಕಟ್ಟೆಯ ನೀರು ಬಳಕೆಯಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರಕ್ಕೆ ಮಧ್ಯ ಪ್ರವೇಶಿಸುವ ಅಧಿಕಾರವಿಲ್ಲ ಎಂದು ಹೇಳಿದರು.

ಹವಾಮಾನ ಬದಲಾವಣೆ ಆಧಾರಿಸಿ ಜಲನೀತಿ ರೂಪಿಸಿ: ನೀರಿನ ಸಂರಕ್ಷಣೆ – ಉಪಯೋಗದ ಕುರಿತ ನೀತಿ ರೂಪಿಸಬೇಕು, ಜೊತೆಗೆ ಸದನ ಸಮಿತಿ ರಚಿಸಬೇಕು. ಇಡೀ ರಾಜ್ಯಾದ್ಯಂತ ಎಲ್ಲಾ ಅಣೆಕಟ್ಟು ಭೇಟಿ ನೀಡಿ, ನೀರಿನ ಬಳಕೆ ಮತ್ತು ಸಂರಕ್ಷಣೆ ಬಗ್ಗೆ ವರದಿ ಸಲ್ಲಿಸಬೇಕು. ಅಧಿವೇಶನದಲ್ಲಿ ಚರ್ಚೆಯಾಗಬೇಕು.

ನಾವು ಎಂಜಿನಿಯರುಗಳು ಕರಡು ತಯಾರಿಸಿ ಕಳುಹಿಸುತ್ತೇವೆ ಎಂದು ನಿವೃತ್ತ ಮೇಜರ್‌ ಜನರಲ್‌ ಎಸ್‌.ಜಿ. ಒಂಬತೆರೆ ಸಭೆಗೆ ತಿಳಿಸಿದರು. ಭಾರತ ಹಲವಾರು ನದಿಗಳು ಮಳೆಯನ್ನೇ ಆಶ್ರಯಿಸಿವೆ. ಒಂದು ವೇಳೆ ಹವಾಮಾನ ವೈಪರೀತ್ಯದಿಂದ ಮಳೆ ಬಾರದಿದ್ದರೆ ಎಲ್ಲೆಡೆ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಹವಾಮಾನ ಬದಲಾವಣೆಯನ್ನು ನಾವು ನಿರ್ಲಕ್ಷಿಸಿ ನೀರಿನ ಲಭ್ಯತೆ ಆಧಾರದ ಮೇಲೆ ನಿರ್ವಹಣೆ ಮತ್ತು ನೀತಿಗಳನ್ನು ರೂಪಿಸುತ್ತಿದ್ದೇವೆ.

ಇದು ತಪ್ಪು ನಿರ್ಧಾರ. ಹವಾಮಾನ ಬದಲಾವಣೆ ಆಧಾರದ ಮೇಲೆ ನೀರಿನ ನಿರ್ವಹಣೆ ಹಾಗೂ ಜಲನೀತಿಯನ್ನು ರೂಪಿಸಬೇಕಿದೆ. ಹವಾಮಾನ ಬದಲಾವಣೆಯಿಂದಾಗಬಹುದಾದ ಎಲ್ಲಾ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೀರು ಹಂಚಿಕೆ ಮಾಡುವ ಕೆಲಸವಾಗಬೇಕು ಎಂದರು.

ಸಭೆಯಲ್ಲಿ ತಜ್ಞರಾದ ಎಸ್‌.ವಿ. ಪ್ರಸನ್ನ, ಡಾ.ಕೆ. ಸುರೇಶ್‌, ಡಾ.ಜಿ.ಬಿ. ಕೃಷ್ಣಪ್ಪ, ಎಚ್‌.ಪಿ. ಗೋವಿಂದರಾಜು, ವಿ. ಶ್ರೀನಾಥ್‌, ಮುರಳೀಧರ, ಎನ್‌.ಎಂ. ಯಾದವಗಿರಿ, ಎಚ್‌.ಕೆ. ನಾಗೇಗೌಡ, ಚಂದ್ರಮೋಹನ್‌, ಯು.ವಿ. ರಾಮದಾಸ್‌ ಭಟ್‌, ಕೆ.ಎಸ್‌. ನಾಗೇಂದ್ರ, ಬಿ. ಸತೀಶ್‌, ತಾ.ರು. ನಟರಾಜು, ಪುಷ್ಪ ನಾಗೇಂದ್ರ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next