ಹುಬ್ಬಳ್ಳಿ: ಪಡಿತರ ಬದಲಿಗೆ ಹಣ ವಿತರಣೆ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿಗಳೊಂದಿಗೆ ಇದರ ಸಾಧಕ-ಬಾಧಕ ಚರ್ಚಿಸಿ, ಅಂತಿಮ ಅನುಮತಿ ಪಡೆದ ನಂತರವೇ ಅನುಷ್ಠಾನಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ. ಖಾದರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆಬ್ರವರಿಯಿಂದ ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿ ಕುಟುಂಬಕ್ಕೆ ತೊಗರಿ, ಹೆಸರು ಬೇಳೆ ಸೇರಿದಂತೆ ಮಾಸಿಕ ಒಂದು ಕೆಜಿ ಪ್ರೋಟಿನ್‌ಯುಕ್ತ ಆಹಾರ ವಿತರಿಸಲಾಗುವುದು ಎಂದರು.
ಪಾಸ್‌ಪೋರ್ಟ್‌ಗಿಂತಲೂ ವೇಗವಾಗಿ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಅತ್ಯಾಧುನಿಕ ಸಾಫ್ಟ್‌ವೇರ್ ಸಿದ್ಧವಾಗಿದೆ. ಅರ್ಜಿದಾರರು ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಗ್ರಾಹಕರಿಗೆ ಪಡಿತರ ಚೀಟಿ ತಲುಪಲಿದೆ. ಎಪಿಎಲ್ ಕಾರ್ಡ್ ವಿತರಣೆ ಆರಂಭವಾಗಿ, 42 ಸಾವಿರ ಕಾರ್ಡ್ ಹಂಚಿಕೆಯಾಗಿದೆ. ಶೀಘ್ರವೇ ಬಿಪಿಎಲ್ ಕಾರ್ಡ್ ಹಂಚಿಕೆ ಆರಂಭವಾಲಿದೆ ಎಂದರು.
ಪಡಿತರ ವಿತರಣೆಗೆ ಯಾವುದೇ ಕೊರತೆ ಇಲ್ಲ. ಶೇ. 90ರಷ್ಟು ಪಡಿತರ ಅಂಗಡಿಗಳಿಂದ ಸಂಗ್ರಹದ (ಕ್ಲೋಸಿಂಗ್ ಸ್ಟಾಕ್) ಲೆಕ್ಕ ಸಿಕ್ಕಿದೆ. ಇನ್ನುಳಿದಂತೆ ಜನವರಿ ವರೆಗೆ ಶೇ. 10ರಷ್ಟು ಸಿಕ್ಕಿಲ್ಲ. ಜ. 29ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು.
ಇದನ್ನು ಸರಿಪಡಿಸಲು ಡಿಜಿಟಲ್ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ. ಫೆಬ್ರವರಿ 10ರೊಳಗೆ ಎಲ್ಲ ಪಡಿತರ ಆಹಾರಧಾನ್ಯ ಅಂಗಡಿಗಳಿಗೆ ಆಹಾರ ಸರಬರಾಜು ಮಾಡಲಾಗುವುದು. ಪ್ರತಿ ತಿಂಗಳು 1ನೇ ತಾರೀಖೀಗೆ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮಾರ್ಚ್ 1ರಿಂದಲೇ ಇದು ಅನ್ವಯವಾಗಲಿದೆ ಎಂದರು.