ಬೆಂಗಳೂರು: ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು ಉದ್ಯೋಗ ಹುಡುಕುವ ಬದಲು ಅವರೇ ಉದ್ಯಮ ಆರಂಭಿಸುವ ಮಟ್ಟಕ್ಕೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದು ರಾಷ್ಟ್ರೀಯ ಮೌಲಿಕರಣ ಮತ್ತು ಮಾನ್ಯತಾ ಪರಿಷತ್‌ನ ನಿರ್ದೇಶಕ ಪ್ರೊ.ಧೀರೆಂದ್ರ ಪಾಲ್ ಸಿಂಗ್ ಅಭಿಪ್ರಾಯಪಟ್ಟರು.
ಬೆಂಗಳೂರು ವಿವಿಯ 52ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, “ನವೋದ್ಯಮ (ಸ್ಟಾರ್ಟಪ್ಸ್)ಗಳಿಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿದೆ. ವಿದ್ಯಾರ್ಥಿಗಳು ಕೂಡ ಓದಿನ ಬಳಿಕ ಉದ್ಯೋಗ ಹುಡುಕುವ ಆಲೋಚನೆಗಿಂತ ಉದ್ಯಮ ಆರಂಭಿಸುವ ಯೋಚನೆ ಇಟ್ಟುಕೊಳ್ಳಬೇಕು.
ಕಲಿಕೆ ವಿಶ್ವವಿದ್ಯಾಲಯದಲ್ಲಿ ಮುಗಿಯುವಂಥದ್ದಲ್ಲ. ಜ್ಞಾನವೆಂಬುದು ಒಂದು ಸಾಗರ. ಅದಕ್ಕೆ ಯಾವುದೇ ಗಡಿ, ಎಲ್ಲೆಗಳಿಲ್ಲ,”ಎಂದರು. ಕುಲಾಧಿಪತಿಯೂ ಆದ ರಾಜ್ಯಪಾಲ ವಜುಬಾಯಿ ವಾಲಾ ವಿದ್ಯಾರ್ಥಿಗಳಿಗೆ ಪದವಿ, ಪಿಎಚ್‌ಡಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು.
ಅಂಧರಾದರು ಸಂಗೀತದಲ್ಲಿ ಚಿನ್ನ: ಹುಟ್ಟು ಅಂಧರಾಗಿರುವ ಎಂ.ವೆಂಕಟೇಶ್ ಬಿ.ಎ. ಸಂಗೀತ ವಿಭಾಗದಲ್ಲಿ ಸುವರ್ಣ ಪದಕ ಪಡೆದುಕೊಂಡರು. ಆಚಾರ್ಯ ಪಾಠಶಾಲಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡಿದ ಎಂ.ವೆಂಕಟೇಶ್ ಕೋಲಾರ ಮೂಲದವರು. ಅವರ ಉತ್ತಮ ಸಾಧನೆಗೆ ವಿವಿಯ ಸುಂದರಮ್ಮ ಸಿದ್ದಲಿಂಗಾಚಾರ್ಯ ನೆನಪಿನ ಸುವರ್ಣ ಪದಕ ದೊರೆತಿದೆ.
“ಕೋಲಾರದ ತಲಗುಂದ ನನ್ನ ಊರು. ಅಲ್ಲಿಯೇ ಹೈಸ್ಕೂಲ್‌ವರೆಗೆ ವ್ಯಾಸಂಗ ಮಾಡಿದೆ. ಸಂಗೀತದಲ್ಲಿ ಆಸಕ್ತನಾಗಿದ್ದರಿಂದ ಇಂದಿರಾನಗರದಲ್ಲಿರುವ ಅಣ್ಣನ ಮನೆಯಲ್ಲಿ ಉಳಿದುಕೊಂಡು ಎಪಿಎಸ್ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡಿದೆ. ಸದ್ಯ ಎಂ.ಎ ಅರ್ಥಶಾಸ್ತ್ರ ವ್ಯಾಸಂಗ ಮಾಡುತ್ತಿದ್ದೇನೆ. ಮುಂದೆ ಎಲ್‌ಎಲ್‌ಬಿ ಮಾಡಿ ವಕೀಲನಾಗುವೆ,” ಮನದ ಇಂಗಿತ ವ್ಯಕ್ತಪಡಿಸಿದರು.