ಬೆಂಗಳೂರು: ಪ್ರಸಕ್ತ ಸಾಲಿನಿಂದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರ ಸಮವಸ್ತ್ರದ ಬಣ್ಣ ಬದಲಾಗಲಿದೆ. ಹಾಗೆಯೇ ಶಾಲೆಯಲ್ಲಿ ವಿದ್ಯಾರ್ಥಿನಿಯರು ಲಂಗ ಮತ್ತು ಶರ್ಟ್ ಬದಲಿಗೆ ಚೂಡಿದಾರ್‌ನಲ್ಲಿ ಮಿಂಚಲಿದ್ದಾರೆ.
ಪ್ರತಿವರ್ಷ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ಯಾಂಟ್ ಮತ್ತು ಶರ್ಟ್ ಹಾಗೂ ವಿದ್ಯಾರ್ಥಿನಿಯರಿಗೆ ಲಂಗ ಮತ್ತು ಶರ್ಟ್ ವಿತರಣೆ ಮಾಡಲಾಗುತ್ತಿತ್ತು. ಈ ಶೈಕ್ಷಣಿಕ ವರ್ಷದಿಂದ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಚೂಡಿದಾರ್ ನೀಡಲಾಗುತ್ತದೆ.
ನೀಲಿ ಬಣ್ಣದ ಲಂಗ ಮತ್ತು ಆಕಾಶ ನೀಲಿ ಬಣ್ಣದ ಶರ್ಟ್ ಬದಲಿಗೆ ಸಲ್ವಾರ್ ಕಮೀಜ್ ಪೈಜಾಮ್‌ಗೆ ಕಂದು ಬಣ್ಣ ಮತ್ತು ಟಾಪ್‌ಗೆ ತಿಳಿ ಹಸಿರಿನ ಕೆಂಪು ಚೌಕುಳಿ ಬಟ್ಟೆ ನೀಡಲಾಗುತ್ತದೆ. ಮೇ 15ರ ನಂತರ ಸಮವಸ್ತ್ರ ವಿದ್ಯಾರ್ಥಿಗಳಿಗೆ ತಲುಪಲಿದೆ ಎಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕ ಕೆ.ಆನಂದ್ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ನೀಡುವ ನೀಲಿ ಬಣ್ಣದ ಪ್ಯಾಂಟ್ ಮತ್ತು ಆಕಾಶ ನೀಲಿ ಬಣ್ಣದ ಶರ್ಟ್‌ನಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಹಾಗೆಯೇ 1ರಿಂದ 7ನೇ ತರಗತಿಯ ವಿದ್ಯಾರ್ಥಿನಿಯರಿಗೆ ನೀಡುವ ಸಮವಸ್ತ್ರದಲ್ಲೂ ಯಾವ ಬದಲಾವಣೆಯೂ ಇಲ್ಲ. ಲಂಗ ಮತ್ತು ಶರ್ಟ್ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ 2017-18ನೇ ಸಾಲಿನ ಸಮವಸ್ತ್ರ ವಿತರಣೆಗೆ ಬಟ್ಟೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಓ) ಕಚೇರಿಗೆ ತಲುಪಿಸಲಾಗುತ್ತದೆ.
ಬಿಇಒಗಳು ಅದನ್ನು ತಮ್ಮ ವ್ಯಾಪ್ತಿಯ ಶಾಲೆಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಿತರಣೆ ಮಾಡಲಿದ್ದಾರೆ. ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರದಿಂದ ಒಂದರಿಂದ ಹತ್ತನೇ ತರಗತಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ನೀಡಲಾಗುತ್ತಿದೆ.