ನಾಲತವಾಡ: ಶೈಕ್ಷಣೀಕ ಪ್ರಗತಿ ಕುಂಠಿತ ಕಂಡು ಬರುತ್ತಿದೆ ಹಾಗೂ ಮಾತೃ ಭಾಷೆ ಕನ್ನಡಕ್ಕ ಹೆಚ್ಚು ಒತ್ತು ಕೊಡದೇ ಮನಬಂದಂತೆ ಬೋಧಿಸುವ ಕೆಲಸ ನಡೆದಿದ್ದು ಎಲ್ಲ ಶಿಕ್ಷಕರನ್ನು ಬೇರೆಡೆ ವರ್ಗಾಹಿಸಬೇಕು ಎಂದು ಒತ್ತಾಯಿಸಿ ಪಾಲಕರು ಹಾಗೂ ಬಂಜಾರ ಸಂಘದ ಪದಾಧಿಕಾರಿಗಳು ಶಾಲೆಗೆ ದಿಢೀರ್ ಮುತ್ತಿಗೆ ಹಾಕಿ ಶಿಕ್ಷಕರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಸಮೀಪದ ನಾಗಬೇನಾಳ ತಾಂಡೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ತಾಂಡೆ ಶಾಲೆಯಲ್ಲಿ ಕೆಲವು ಶಿಕ್ಷಕರ ವರ್ತನೆ ಮತ್ತು ಸಮಯ ಪ್ರಜ್ಞೆ ಕೊರತೆಯಿಂದ ನಮ್ಮ ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ಕುಸಿಯುತ್ತಿದ್ದು ಭೀತಿ ಉಂಟು ಮಾಡಿದೆ. ಇಲ್ಲಿಯ ಮುಖ್ಯ ಶಿಕ್ಷಕರು ಸೇರಿದಂತೆ ಕೆಲವು ಗುರುಮಾತೆಯರು ವಿದ್ಯಾರ್ಥಿಗಳಿಗೆ ಬೋ ಧಿಸುವಲ್ಲಿ ಹಿಂದೆ ಬಿದ್ದಿದ್ದು ಇದುವರೆಗೂ ತಾಂಡೆ ಶಾಲೆಯಲ್ಲಿ ಉತ್ತಮ ಕಾರ್ಯಕ್ರಮಗಳು ನಡೆದಿಲ್ಲ ಎಂದು ದೂರಿದರು.
ರಾಷ್ಟ್ರೀಯ ಹಬ್ಬಗಳಲ್ಲಿ ಮಕ್ಕಳಿಗೆ ಉತ್ತಮ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಮನರಂಜನೆ ನೀಡುತ್ತಿಲ್ಲ. ಜೊತೆಗೆ ಮಕ್ಕಳ ಮನೋಜ್ಞಾನಕ್ಕೆ ಪೂರಕವಾದ ಭಾಷಣ, ಪ್ರಬಂಧ, ಕ್ವಿಜ್ ಸ್ಪರ್ಧೆ ಹಾಗೂ ಕ್ರೀಡೆಗಳಂತಹ ಕಾರ್ಯಕ್ರಮಗಳು ನಮ್ಮ ಶಾಲೆಯಲ್ಲಿ ಗಗನ ಕುಸುಮವಾಗಿವೆ ಎಂದರು.
ಕಳಪೆ ಬಿಸಿಯೂಟ: ಕಳೆದ ಹಲವು ವರ್ಷಗಳಿಂದ ನಮ್ಮ ಮಕ್ಕಳು ಶಾಲೆಯಲ್ಲಿ ನೀಡಿದ ಬಿಸಿಯೂಟ ಸವಿಯುತ್ತಿದ್ದು ಬಡಿಸುವ ಅಡಿಗೆಯಲ್ಲಿ ಸಮರ್ಪಕ ತರಕಾರಿ, ಎಣ್ಣೆ, ಕಾಳು ಬೆರಸದ ಪರಿಣಾಮ ಮಕ್ಕಳು ಬಿಸಿಯೂಟ ಸವಿಯಲು ಹಿಂದೇಟು ಹಾಕುತ್ತಿದ್ದಾರೆ. ಅಕ್ಷರ ದಾಸೋಹ ನಿಯಮಗಳನ್ನು ಮೀರಿ ಅಡುಗೆ ಮಾಡಿ ಮಕ್ಕಳಿಗೆ ನೀಡುತ್ತಿದ್ದು ಇದುವರೆಗೂ ಅಧಿಕಾರಿಗಳು ಗಮನ ಹರಿಸಿಲ್ಲ.
ಸ್ವತಃ ಮುಖ್ಯಗುರುಗಳೇ ಕೆಲವು ಬಾರಿ ಬಿಸಿಯೂಟಕ್ಕೆ ಬಳಸುವ ಎಣ್ಣೆ ಪ್ಯಾಕೆಟ್‌ಗಳನ್ನು ತಮ್ಮ ವಾಹನದಲ್ಲಿ ಒಯ್ಯುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೇವೆ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ತಮ್ಮ ಕಾಯಕ ಮುಂದುವರೆಸಿದ ಪರಿಣಾಮ ಇಂದಿಗೂ ಸಹ ಬಿಸಿಯೂಟಕ್ಕೆ ವಾರಕ್ಕೊಮ್ಮೆ ಎಣ್ಣೆ ಪ್ಯಾಕೆಟ್ ಕೊಡುತ್ತಾರೆ. ಇದರಿಂದ ರುಚಿಕಟ್ಟಾದ ಅಡುಗೆ ಹೇಗೆ ಸಾಧ್ಯ ಎಂದು ಸಂಘದ ಪದಾಧಿಕಾರಿಗಳು ದೂರಿದರು.
ಅಡುಗೆ ಸಿಬ್ಬಂದಿಗಳ ಆರೋಪ: ಬಿಸಿಯೂಟ ಸಿದ್ಧತೆಗೆ ಅವಶ್ಯವಿರುವ ಮಸಾಲೆ, ತರಕಾರಿ ಹಾಗೂ ಎಣ್ಣೆ ಪ್ಯಾಕೆಟ್‌ಗಳನ್ನು ಇಲ್ಲಿಯ ಮುಖ್ಯ ಶಿಕ್ಷಕ ನಮಗೆ ಸಮರ್ಪಕವಾಗಿ ನೀಡುತ್ತಿಲ್ಲ, ನಿಮಯ ಮೀರಿ ಕಡಿಮೆ ಪ್ರಮಾಣದ ಕೊಟ್ಟ ಸಾಮಗ್ರಿಗಳಿಂದ ಊಟ ಸಿದ್ಧಪಡಿಸಿದರೆ ರುಚಿಯಾದ ಅಡುಗೆ ಮಾಡಲು ಹೇಗೆ ಸಾಧ್ಯ ಮತ್ತು ವಾರಕ್ಕೋಮ್ಮೆ ಒಂದು ಎಣ್ಣೆ ಪ್ಯಾಕೆಟ್ ಕೊಡುತ್ತಾರೆ ಎಂದು ಸ್ವತಃ ಅಡುಗೆ ಸಿಬ್ಬಂದಿಗಳೇ ಮುಖ್ಯಶಿಕ್ಷಕರ ಮೇಲೆ ಆರೋಪ
ಮಾಡಿದರು.
ಈ ವೇಳೆ ಬಂಜಾರ ಸಮಾಜದ ಅಧ್ಯಕ್ಷರಾದ ಆನಂದ ನಾಯಕ, ರಘು ಪವಾರ, ಬಾಲು ನಾಯಕ, ಮಂಜು ನಾಯಕ, ಆಕಾಶ ರಾಠೊಡ, ರವಿ ನಾಯಕ, ಯಮನೂರಿ ನಾಯಕ, ಲಿಂಗಪ್ಪ ರಾಠೊಡ, ಯಮನಪ್ಪ ರಾಠೊಡ, ರಮೇಶ
ನಾಯಕ, ರಾಮಪ್ಪ ಚವ್ವಾಣ ಹಾಗೂ ಛತ್ರಪ್ಪ ನಾಯಕ ಇದ್ದರು.