ಕರ್ಮಫಲದ ಬಗ್ಗೆ ನೀವು ಪುರಾಣ, ಕಥೆಗಳಲ್ಲಿ ಕೇಳಿರುತ್ತೀರಿ. ಈಗ ಇದೇ ಕರ್ಮದ ವಿಷಯವನ್ನು ಇಲ್ಲೊಂದು ಚಿತ್ರತಂಡ ಸಿನಿಮಾದ ಮೂಲಕ ತೆರೆಮೇಲೆ ಹೇಳಲು ಹೊರಟಿದೆ. ಅಂದಹಾಗೆ, ಈ ಕರ್ಮದ ವಿಷಯಕ್ಕೆ ಚಿತ್ರತಂಡ ಇಟ್ಟಿರುವ ಹೆಸರು “ಇನ್‌ಸ್ಟಂಟ್ ಕರ್ಮ’.
ಈ ಹಿಂದೆ “ಡಿ.ಕೆ ಬೋಸ್’ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಸಂದೀಪ್ ಮಹಾಂತೇಶ್, “ಇನ್‌ಸ್ಟಂಟ್ ಕರ್ಮ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಹೊರಬಂದಿದೆ.
ಚಿತ್ರದ ಬಗ್ಗೆ ಮಾತನಾಡುವ ಸಂದೀಪ್ ಮಹಾಂತೇಶ್, “ನಾವು ಮಾಡಿದ ಕರ್ಮಕ್ಕೆ ಪ್ರತಿಫಲ ಅನುಭವಿಸಬೇಕು ಎಂದು ಅನೇಕರು ಹೇಳುತ್ತಾರೆ. ಆದರೆ ಆ ಕರ್ಮಫಲವನ್ನು ಯಾವತ್ತಿಗೊ ಅನುಭವಿಸುವಂಥದ್ದಲ್ಲ. ಈಗ ಮಾಡಿದ ಕರ್ಮಫಲವನ್ನು ಈಗಲೇ ಅನುಭವಿಸಬೇಕು. ಇದೇ ವಿಷಯವಿಟ್ಟುಕೊಂಡು “ಇನ್‌ಸ್ಟಂಟ್ ಕರ್ಮ’ ಚಿತ್ರ ನಿರ್ದೇಶಿಸಿದ್ದೇನೆ. ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ. ನಾನು ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲೊಂದು ಘಟನೆ ನಡೆಯಿತು. ಅದನ್ನು ಸ್ಪೂರ್ತಿಯಾಗಿಟ್ಟುಕೊಂಡು ಕಥೆ ಮಾಡಿದ್ದೇನೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.
ಇನ್ನು “ಇನ್‌ಸ್ಟಂಟ್ ಕರ್ಮ’ ಚಿತ್ರದಲ್ಲಿ ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಯಶ್ ಶೆಟ್ಟಿ, “ನಾನು ಈ ಚಿತ್ರದ ಪ್ರಮುಖ ಪಾತ್ರಧಾರಿ. ಹಾಗಂತ ಈ ಸಿನಿಮಾದಲ್ಲಿ ನನ್ನ ಪಾತ್ರ ಹೀರೋ ಎನ್ನುವುದಕ್ಕಿಂತ, ಕಥೆಯೇ ಈ ಚಿತ್ರದ ಹೀರೋ ಎನ್ನಬಹುದು. ನಿರ್ದೇಶಕರು ಅಷ್ಟು ಚೆನ್ನಾಗಿ ಕಥೆ ಹೆಣೆದಿದ್ದಾರೆ. ಚಿತ್ರ ನೋಡುಗರಿಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ.
ಇದನ್ನೂ ಓದಿ:ಹೊರಬಂತು ‘ಆಲ್ ಓ.ಕೆ’ ಹೊಸ ಮ್ಯೂಸಿಕ್ ಆಲ್ಬಂ
ಉಳಿದಂತೆ ಅಂಜನ್ ದೇವ್ (ಸಲಗ), ಹರಿ, ಪ್ರಜ್ವಲ್ ಶೆಟ್ಟಿ, ಧನಂಜಯ, ಪುನೀತ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಭಾಸ್ಕರ ಹೆಗ್ಡೆ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಸೂರಜ್ ಜೋಯಿಸ್ ಸಂಗೀತ ಸಂಯೋಜನೆಯಿದೆ. ಸಂತೋಷ್ ಮಹಾಂತೇಶ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ 1ಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.