ಉಡುಪಿ: ಇಂದ್ರಾಳಿ ರೈಲ್ವೇ ನಿಲ್ದಾಣದ ಪ್ಲ್ರಾಟ್‌ಫಾರಂ 1ರಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶೆಲ್ಟರ್‌ಗಳನ್ನು ತೆಗೆದು ಹೊಸ ಪ್ಲ್ರಾಟ್‌ಫಾರಂ ಶೆಲ್ಟರ್‌ಗಳನ್ನು ಅಳವಡಿಸಲಾಗುತ್ತಿದೆ.
ಉದಯವಾಣಿ ಸುದಿನದಲ್ಲಿ ಕೆಲವು ತಿಂಗಳ ಹಿಂದೆ ಇಂದ್ರಾಳಿ ರೈಲ್ವೇ ಸ್ಟೇಷನ್ ಸುಧಾರಿಸಲಿ ಎಂಬ ಶೀರ್ಷಿಕೆಯಡಿ ನಿರಂತರ ಅಭಿಯಾನ ನಡೆಸಿ, ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅಗತ್ಯ ಮೂಲಸೌಕರ್ಯವನ್ನು ತುರ್ತಾಗಿ ಪೂರೈಸುವ ನಿಟ್ಟಿನಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿತ್ತು.
ಕಿತ್ತುಹೋಗಿರುವ ಶೆಲ್ಟರ್‌ಗಳು, ಆಸನ ವ್ಯವಸ್ಥೆ, ಎಸ್ಕಲೇಟರ್ ಅವ್ಯವಸ್ಥೆ, ರೂಫ್ಟಾಪ್‌ಗ್ಳ ಬಗ್ಗೆ ಉದಯವಾಣಿ ನಿರಂತರವಾಗಿ ವರದಿ ಪ್ರಕಟಿಸಿ ಎಚ್ಚರಿಸಿತ್ತು. ವರದಿ ಪ್ರಕಟಗೊಂಡ ಬಳಿಕ ಶಾಸಕ ಯಶ್‌ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತಾಗಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬಳಿಕ ಕೆಲವು ಸಮಯದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸುಸಜ್ಜಿತ ಎಕ್ಸಿಕ್ಯೂಟಿವ್ ಲಾಂಚ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಮುಂದುವರಿದು ಈಗ ಶೆಲ್ಟರ್ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದೆ.
ರೈಲ್ವೆ ನಿಲ್ದಾಣದಲ್ಲಿ ಮೂಲಸೌಕರ್ಯ ಒದಗಿಸುವ ಕಾರ್ಯ ನಡೆಯುತ್ತಿದೆ. ಇನ್ನು ಮುಂದೆ ಪ್ಲ್ರಾಟ್‌ಫಾರಂನಲ್ಲಿರುವ ಫ್ಲೋರ್ ಅನ್ನು ನವೀಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ಕೊಂಕಣ ರೈಲ್ವೇಯ ಪಿಆರ್‌ಓ ಸುಧಾಕೃಷ್ಣ ಮೂರ್ತಿ ತಿಳಿಸಿದ್ದಾರೆ. ಸುಮಾರು 20 ಲ.ರೂ.ವೆಚ್ಚದ ಯೋಜನೆ ಇದಾಗಿದ್ದು, ಕಂದಾಯ ಬಜೆಟ್‌ನಲ್ಲಿ ಇದಕ್ಕಾಗಿ ಹಣ ಮೀಸಲಿರಿಸಲಾಗಿತ್ತು. ಮೂಲ್ಕಿ ರೈಲ್ವೇ ನಿಲ್ದಾಣದಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಉಡುಪಿಯಲ್ಲಿ ಶೀಘ್ರ ಪೂರ್ಣಗೊಳ್ಳಲಿದೆ. ಅನಂತರ ಪಡುಬಿದ್ರಿ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ. ಫ್ಲೋರ್ ನವೀಕರಣವನ್ನು ವಿಶೇಷ ಅನುದಾನದಲ್ಲಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ರೈಲ್ವೇ ಮಂತ್ರಾಲಯವು ಉಡುಪಿ ರೈಲು ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆಯಡಿ ಅಂಗೀಕರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಮುಖ್ಯವಾಗಿ ಪ್ಲ್ರಾಟ್‌ಫಾರಂ ಸಂಖ್ಯೆ 2ರಲ್ಲಿಯೂ ಸುಸಜ್ಜಿತ ಶೆಲ್ಟರ್ ನಿರ್ಮಾಣದ ಅಗತ್ಯವಿದೆ.