ಬೆಂಗಳೂರು: ಭಾರತೀಯರ ಬಹುದಿನಗಳ ಆಶಯವಾಗಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿದ್ದು, 2024ರಲ್ಲಿ ಸಂಪೂರ್ಣ ಕೆಲಸ ಮುಕ್ತಾಯಗೊಳ್ಳಲಿದೆ.
2024ರ ಸಂಕ್ರಾತಿ ವೇಳೆಗೆ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಸದಸ್ಯ ಗೋಪಾಲ್ ಜೀ ಹೇಳಿದರು.
ಕಾಚರಕನಹಳ್ಳಿಯ ದಕ್ಷಿಣ ಅಯೋಧ್ಯೆ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಶ್ರೀ ಧನ್ವಂತರಿ ಮಹಾಯಜ್ಞ’ದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, 2024ರಲ್ಲಿ ಅಯೋಧ್ಯೆ ರಾಮ ಮಂದಿರ ಮೊದಲ ಹಂತದ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ ಎಂದು ಹೇಳಿದರು.
ಈಗ ನೆಲದಿಂದ 20 ಅಡಿ ಮೇಲಿನ ವರೆಗೂ ರಾಮಮಂದಿರ ನಿರ್ಮಾಣ ಕೆಲಸ ಮುಗಿದಿದೆ. ರಾಮ ಮಂದಿರಕ್ಕೆ ಬುನಾದಿ ಹಾಕುವ ಕಾರ್ಯವಾಗಿದೆ. ಭೂಮಿಯ 45 ಅಡಿ ಅಡಿ ಆಳದಲ್ಲಿ ಸಿಮೆಂಟ್ ಕಾಂಕ್ರೀಟ್ ಕೆಲಸ ನಡೆದಿದೆ.
ಸದ್ಯ ಅದರ ಮೇಲೆ ಬೆಂಗಳೂರಿನಿಂದ ತರಿಸಿಕೊಂಡಿರುವ 1,700 ಗ್ರಾನೈಟ್ ಕಲ್ಲು ಇಡುವ ಕಾರ್ಯ ನಡೆಯುತ್ತಿದೆ. ಕೆಲ ದಿನಗಳಲ್ಲಿ ಈ ಕೆಲಸವೂ ಮುಕ್ತಾಯಗೊಳ್ಳಲಿದೆ. ಮುಂದೆ ಅದರ ಮೇಲೆ ರಾಜಸ್ಥಾನದ ಭರತ್‌ಪುರ ಜಿಲ್ಲೆ ಯ ಗುಲಾಬಿ ಬಣ್ಣದ ಕಲ್ಲು ಕೆತ್ತನೆ ಅಳವಡಿಸಲಾಗುತ್ತದೆ. 1 ಲಕ್ಷ ಕಲ್ಲುಗಳು ಕೆತ್ತನೆಯಾಗಿ ಈಗಾಗಲೇ ಅಯೋಧ್ಯೆ ತಲುಪಿದೆ. 600 ಕಲ್ಲುಗಳನ್ನು ಮಂದಿರದಲ್ಲಿ ಇಡಲಾಗಿದೆ.
2024 ಜನವರಿಗೆ ಒಂದು ಮಹಡಿಯ ಕಾರ್ಯ ಮುಗಿಯಬಹುದು. ಇನ್ನೊಂದು ಮಹಡಿಗೆ ಮತ್ತೆ 6 ತಿಂಗಳು ಬೇಕಾದೀತು. ಒಟ್ಟಾರೆ ಮುಂದಿನ 2 ವರ್ಷಗಳ ಒಳಗೆ ರಾಮಮಂದಿರ ಕೆಲಸ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ ಎಂದು ವಿವರಿಸಿದರು.
*ಭಕ್ತರಿಗೆ ಮೊಬೈಲ್ ನಿಷೇಧ
ಅಯೋಧ್ಯೆಯ ರಾಮ ಮಂದಿರದಲ್ಲಿ ದರ್ಶನ ಮಾಡುವ ಭಕ್ತರಿಗೆ ಪೆನ್ನು, ಮೊಬೈಲ್ ಸಹಿತ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಯ್ಯಲು ನಿಷೇಧಿಸಲಾಗುವುದು. ಈ ವಸ್ತುಗಳನ್ನು ಇಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಗೋಪಾಲ್ ಜೀ ತಿಳಿಸಿದ್ದಾರೆ.