ಹುಣಸೂರು: ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತರ ನಡುವೆ ವಾಗ್ವಾದವುಂಟಾಗಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ನಗರದ ಎಪಿಎಂಸಿ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.
ಹುಣಸೂರು ತಾಲೂಕಿನ ಅಂಗಟಹಳ್ಳಿಯ ನಿವಾಸಿ ಬೀರೇಶ್(23) ಮೃತ ವ್ಯಕ್ತಿ. ಈತನ ಸ್ನೇಹಿತರಾದ ಗೋಕುಲ್ ರಸ್ತೆಯ ಕುಟ್ಟಿ ಜಿಮ್‌ನ ತರಬೇತುದಾರ ನಿತಿನ್ ಅಲಿಯಾಸ್ ವಠಾರ ಹಾಗೂ ಕಲ್ಕುಣಿಕೆಯ ಮನು ಆರೋಪಿಗಳು.
ಅರೋಪಿ ನಿತಿನ್ ಬೆಂಗಳೂರು ಮೂಲದ ಯುವತಿಯನ್ನು ಮದುವೆ ಮಾಡಿಕೊಂಡಿದ್ದು, ಹೀಗಾಗಿ ನಿತಿನ್ ಬಗ್ಗೆ ಕೆಟ್ಟದಾಗಿ ಇನ್‌ಸ್ಟಾಗ್ರಾಂನಲ್ಲಿ ಬೀರೇಶ್ ಬಿಂಬಿಸಿದ್ದನೆಂಬ ಆರೋಪದ ಹಿನ್ನೆಲೆಯಲ್ಲಿ ನಿತಿನ್ ಮತ್ತು ಮನು ಮಂಗಳವಾರ ಬೈಕಿನಲ್ಲಿ ಬೀರೇಶ್‌ನನ್ನು ಕೂರಿಸಿಕೊಂಡು ಎಪಿಎಂಸಿ ಬಳಿಯ ಬೈಪಾಸ್ ರಸ್ತೆಯಲ್ಲಿ ಇಳಿಸಿ, ಪ್ರಶ್ನಿಸಿದ್ದಾರೆ.
ಇಬ್ಬರಲ್ಲೂ ಮಾತಿನ ಚಕಮಕಿ ನಡೆದಿದೆ. ಬೀರೇಶ ತಾನು ಪೋಸ್ಟ್ ಮಾಡಿಲ್ಲ ಇದು ಹೇಗಾಗಿದೆ ಗೊತ್ತಿಲ್ಲ ಎನ್ನುತ್ತಿದ್ದಂತೆ. ನಿನಗೊಂದು ಗತಿ ಕಾಣಿಸುತ್ತೇನೆ, ಆಗ ಎಲ್ಲಾ ಬಾಯಿ ಬಿಡುತ್ತೀಯಾ. ಎಲ್ಲಾ ಸರಿಯಾಗುತ್ತದೆಂದು ಹೇಳಿ ನಿತಿನ್ ಚಾಕುವಿನಲ್ಲಿ ಇರಿದಿದ್ದಾನೆ. ಚೂರಿ ಇರಿಯುತ್ತಿದ್ದಂತೆ ಬೀರೇಶ್ ಕೂಗಿಕೊಂಡಿದ್ದು, ಅಲ್ಲಿದ್ದ ಮರದ ವ್ಯಾಪಾರಿಯೊಬ್ಬರು ಆತನ ರಕ್ಷಣೆಗೆ ಬಂದು ಮುಂದಾಗುವ ಅನಾಹುತವನ್ನು ತಪ್ಪಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಅಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಬೀರೇಶ ಸಾವನ್ನಪಿದ್ದಾನೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಹಳೆಯಂಗಡಿ: ವಾಟ್ಸಪ್‌ನಲ್ಲಿ ಲೊಕೇಶನ್ ಕಳುಹಿಸಿ ನದಿಗೆ ಹಾರಿದ ಮಂಗಳೂರಿನ ಅಂಚೆ ಉದ್ಯೋಗಿ