Advertisement

ಇನ್‌ಸ್ಪೆಕ್ಟರ್‌ ಝಾನ್ಸಿಯ ದುರ್ಗಾವತಾರ

10:40 AM Feb 17, 2018 | Team Udayavani |

“ನನ್ನ ಮಗಳ ಮೇಲೆ ಆಣೆ ಮಾಡಿ ಹೇಳ್ತೀನಿ. ಆ ದುರ್ಗ ಮತ್ತೆ ಯಾವುದೋ ಒಂದು ರೂಪದಲ್ಲಿ ಬಂದೇ ಬರ್ತಾಳೆ. ನಿನ್ನ ಪ್ರಾಣ ತೆಗೀತಾಳೆ. ಇದು ನನ್ನ ಶಾಪ …’ ಎಂದು ಅರ್ಚಕರು ಶಾಪ ಹಾಕಿ ಅದೆಷ್ಟೋ ದಿನಗಳ ನಂತರ … ದೂರದ ಬೆಂಗಳೂರಿನಲ್ಲಿ, ಡಿಜಿಪಿಯೊಬ್ಬರು ತಮ್ಮ ಅಧಿಕಾರಿಗಳಿಗೆ ಒಂದು ಮಿಸ್ಸಿಂಗ ಕೇಸು ಒಪ್ಪಿಸುತ್ತಾರೆ. ಆದರೆ, ಎಲ್ಲರೂ ಒಂದಲ್ಲ ಒಂದು ನೆಪ ಹೇಳಿಕೊಂಡು ಆ ಕೇಸ್‌ನಿಂದ ತಪ್ಪಿಸಿಕೊಳ್ಳುತ್ತಾರೆ.

Advertisement

“ನಮ್ಮ ಡಿಪಾರ್ಟ್‌ಮೆಂಟ್‌ನಲ್ಲಿ ಈ ಕೇಸ್‌ ಬಗೆಹರಿಸೋ ಗಂಡು ಆಫಿಸರ್ರೆà ಇಲ್ವಾ?’ ಎಂದು ಬೇಸರದಿಂದ ಕೇಳಿದಾಗ, “ಗಂಡು ಇಲ್ಲ ಹೆಣ್ಣು ಇದ್ದಾಳೆ …’ ಎಂಬ ಉತ್ತರ ಬರುತ್ತದೆ. ಕಟ್‌ ಮಾಡಿದರೆ, ಇನ್‌ಸ್ಪೆಕ್ಟರ್‌ ಝಾನ್ಸಿ ಎಂಬ ಖಡಕ್‌ ಪೊಲೀಸ್‌ ಆಧಿಕಾರಿಯು ಡಿಜಿಪಿ ಆಫೀಸಿಗೆ ಎಂಟ್ರಿ ಕೊಡುತ್ತಾಳೆ. ಆ ಹೆಣ್ಣು, ಅದೇ ದುರ್ಗೆಯ ಇನ್ನೊಂದು ರೂಪ ಅಂತ ತಿಳಿದುಕೊಂಡುಬಿಡಿ ಮತ್ತು ಆ ದುರ್ಗೆಯು ಪೊಲೀಸ್‌ ಯೂನಿಫಾರ್ಮ್ನಲ್ಲಿ ದುಷ್ಟರನ್ನು ಮಟ್ಟಹಾಕಲು ಬಂದಿದ್ದಾಳೆ ಎನ್ನುವಲ್ಲಿಗೆ “ಜನ ಗಣ ಮನ’ ಶುರುವಾಗುತ್ತದೆ.

ಸಿನಿಮಾದ ಮ್ಯಾಜಿಕ್ಕೇ ಅದು. ಒಂದು ಕಥೆ ಮತ್ತು ಪಾತ್ರವನ್ನು ಎಷ್ಟು ಬಾರಿ ಬೇಕಾದರೂ ರೀಸೈಕಲ್‌ ಮಾಡಬಹುದು. ಎಷ್ಟು ಬಾರಿ ರೀಸೈಕಲ್‌ ಮಾಡಿದರೂ ಜನ ನೋಡುತ್ತಾರೆ ಎಂಬುದು ಚಿತ್ರರಂಗಕ್ಕೆ ಖಚಿತವಾಗಿದೆ. “ಜನ ಗಣ ಮನ’ ಸಹ ಒಂದು ರೀಸೈಕಲ್‌ ಸಿನಿಮಾ ಎಂದರೆ ತಪ್ಪಿಲ್ಲ. ಇಲ್ಲಿ ಒಬ್ಬ ನಿಷ್ಠಾವಂತ ಮತ್ತು ಖಡಕ್‌ ಪೊಲೀಸ್‌ ಅಧಿಕಾರಿಣಿಯ ಪಾತ್ರವೊಂದು ರೀಸೈಕಲ್‌ ಆಗಿ ಬಂದಿದೆ.

ಇನ್ನು ಈ ಪಾತ್ರವನ್ನು ಯಾವ ಕಥೆ, ಹಿನ್ನೆಲೆ, ಪರಿಸರದಲ್ಲಿ ಬೇಕಾದರೂ ಇಡಬಹುದು. ಕೊನೆಗೆ ಆಗುವುದಿಷ್ಟೇ. ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣ. ಇಲ್ಲೂ ಇನ್‌ಸ್ಪೆಕ್ಟರ್‌ ಝಾನ್ಸಿ, ನೀಲಕಂಠ ಎಂಬ ದುಷ್ಟನ ವಿರುದ್ಧ ಸೆಟೆದು ನಿಲ್ಲುತ್ತಾಳೆ. “ಆ ನೀಲಕಂಠನಿಗೆ ಕಂಠದಲ್ಲಿ ಮಾತ್ರ ವಿಷವಿತ್ತು, ಈ ನೀಲಕಂಠನಿಗೆ ಮೈಯೆಲ್ಲಾ ವಿಷವಿದೆ …’ ಎಂದೆಲ್ಲಾ ಡೈಲಾಗ್‌ ಹೊಡೆಯುವ ನೀಲಕಂಠನ ಪಾಪದ ಕೊಡ ಹೇಗೆ ತುಂಬುತ್ತದೆ ಮತ್ತು ಝಾನ್ಸಿ ಆ ಕೊಡವನ್ನು ಹೇಗೆ ಒಡೆಯುತ್ತಾಳೆ ಎಂಬುದೇ ಚಿತ್ರದ ಹೂರಣ.

ಎಲ್ಲಾ ಸರಿ ಚಿತ್ರದ ಕಥೆಯೇನು ಎಂಬ ಪ್ರಶ್ನೆ ಬರಬಹುದು? ಇಲ್ಲಿ ಕಥೆ ಮುಖ್ಯವಲ್ಲ. ಆದರೂ ಒನ್‌ಲೈನ್‌ನಲ್ಲಿ ಹೇಳಬೇಕೆಂದರೆ, ಒಬ್ಬ ದೊಡ್ಡ ಸಮಾಜ ಸೇವಕ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಾನೆ ಮತ್ತು ಅವನ ಕಣ್ಮರೆಯ ಹಿಂದೆ ಅದೇ ನೀಲಕಂಠನ ಕೈವಾಡವಿರುತ್ತದೆ. ಇಷ್ಟು ಹೇಳಿದ ಮೇಲೆ, ಏನೆಲ್ಲಾ ಆಗಬಹುದು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. “ಜನ ಗಣ ಮನ’ ಚಿತ್ರದಲ್ಲಿ ವಿಶೇಷವಾದ ಕಥೆಯಾಗಲೀ, ಸರ್‌ಪ್ರೈಸ್‌ ಆಗಲೀ ಇಲ್ಲ.

Advertisement

ಒಬ್ಬ ನಿಷ್ಠಾವಂತ ಪೊಲೀಸ್‌ ಅಧಿಕಾರಿಯ ದಿನಚರಿ ಇದೆ. ಈಗಾಗಲೇ ಈ ತರಹದ ಪಾತ್ರಗಳಲ್ಲಿ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಅದೇ ಆಯೇಷಾ “ಚೆನ್ನಮ್ಮ ಐಪಿಎಸ್‌’ ಮುಂತಾದ ಚಿತ್ರಗಳಲ್ಲಿ ಖಡಕ್‌ ಪೊಲೀಸ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೂ ಇದು ಹೊಸದಲ್ಲ, ಹಾಗೆಯೇ ಆಯೇಷಾಗೂ ಕೂಡಾ. ಆದರೂ ಅವರು ಶ್ರದ್ಧೆಯಿಂದ ಬಹಳ ಕಷ್ಟಪಟ್ಟು ಹೊಡೆದಾಡಿದ್ದಾರೆ.

ಇನ್ನು ಅಭಿನಯದಲ್ಲಿ ಹೆಚ್ಚು ಹೇಳುವುದಕ್ಕೇನಿಲ್ಲ. ಇನ್ನು ಅವರ ತುಟಿ ಚಲನೆಗೂ, ಸಂಭಾಷಣೆಗೂ, ಆಕಾರಕ್ಕೂ ಮತ್ತು ಧ್ವನಿಗೂ ಸಂಬಂಧವೇ ಇಲ್ಲ ಎನ್ನುವಂತಿದೆ. ಆಯೇಷಾ ಬಿಟ್ಟರೆ ಇರುವ ಎರಡು ದೊಡ್ಡ ಮತ್ತು ಗಮನಾರ್ಹ ಪಾತ್ರಗಳೆಂದರೆ ಅದು ರವಿ ಕಾಳೆ ಮತ್ತು ರಾಮಕೃಷ್ಣ ಅವರದ್ದು. ಇಬ್ಬರೂ ಪಾತ್ರಕ್ಕೆ ಅನುಗುಣವಾಗಿ ನಟಿಸಿದ್ದಾರೆ. ಇನ್ನು ಚಿತ್ರದ ಬಗ್ಗೆ ವಿಶೇಷವಾಗಿ ಹೇಳುವುದೇನಿಲ್ಲ.

ಚಿತ್ರ: ಜನ ಗಣ ಮನ
ನಿರ್ದೇಶನ: ಶಶಿಕಾಂತ್‌ 
ನಿರ್ಮಾಣ: ಪಿ. ಸಾಂಬಶಿವಾ ರೆಡ್ಡಿ
ತಾರಾಗಣ: ಆಯೇಷಾ, ನಿರಂಜನ್‌ ಒಡೆಯರ್‌, ರವಿ ಕಾಳೆ, ರಾಮಕೃಷ್ಣ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next