ಹಾಸನ: ಜಿಲ್ಲೆಯ ರೈತರಿಗೆ ಗುಣಮಟ್ಟದ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜ ಒದಗಿಸುವ ಹಿನ್ನೆಲೆಯಲ್ಲಿ ಕೃಷಿ ಪರಿಕರಗಳ ಮಾರಾಟ ಮಳಿಗೆಗಳ ತಪಾಸಣೆ ಮಾಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ತಿಳಿಸಿದ್ದಾರೆ.
ಬೇಲೂರು ಹಾಗೂ ಹಾಸನ ತಾಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕ ತಿಮ್ಮನಗೌಡ ಪಾಟೀಲ ಹಾಗೂ ಬೇಲೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಕ್ಷಿತಾ ಅವರನ್ನು ಒಳಗೊಂಡ ಜಿಲ್ಲೆಯ ಜಾರಿದಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಸಂದರ್ಭದಲ್ಲಿ ಮಾರಾಟ ಮಳಿಗೆದಾರರು ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿದ್ದು, ಮಾರಾಟಗಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎಂದು ಮಾಹಿತಿ ನೀಡಿದ್ದಾರೆ. ಕಳಪೆ ಪರಿಕರಗಳನ್ನು ಮಾರಾಟ ಮಾಡುವುದು, ಹೆಚ್ಚಿನ ದರದಲ್ಲಿ ಪರಿಕರಗಳನ್ನು ಮಾರಾಟ ಮಾಡುವುದು, ಬಿಡಿ ಬಿತ್ತನೆ ಬೀಜ ಮಾರಾಟ ಮಾಡುವುದು ಹಾಗೂ ನೋಂದಣಿಯಾಗದ ರಾಸಾಯನಿಕ ಮಿಶ್ರಿತ ಜೈವಿಕ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಾರಾಟಗಾರರು ಕೃಷಿ ಇಲಾಖೆ ಪರವಾನಗಿ ಹೊಂದಿರತಕ್ಕದ್ದು, ಮಳಿಗೆಯಲ್ಲಿ ಲಭ್ಯವಿರುವ ದಾಸ್ತಾನು ವಿವರ ಹಾಗೂ ಮಾರಾಟದ ದರವನ್ನು ದರಪಟ್ಟಿಯಲ್ಲಿ ಸ್ಪಷ್ಟವಾಗಿ ರೈತರಿಗೆ ಕಾಣುವಂತೆ ನಮೂದಿಸಬೇಕು. ದಾಸ್ತಾನು ಸ್ವೀಕೃತಿ ಹಾಗೂ ಮಾರಾಟ ದಾಸ್ತಾನು ವಹಿಯ ಸೂಕ್ತ ದಾಖಲೆಗಳನ್ನು ನಿರ್ವಹಿಸಬೇಕು ಎಂದರು.
ರೈತರು ಕೃಷಿ ಪರಿಕರಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಿ ಕಡ್ಡಾಯವಾಗಿ ಬಿಲ್ಲನ್ನು ಪಡೆದು ಕೊಂಡು ಖರೀದಿಸಿದ ರಶೀದಿ ಹಾಗೂ ದಾಸ್ತಾನು ಚೀಲವನ್ನು ಬೆಳೆ ಕಟಾವು ಆಗುವವರೆಗೂ ಕಾಯ್ದಿರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.