ತಿ.ನರಸೀಪುರ: ನೂತನ ಸರಕು ಮತ್ತು ಸೇವಾ ತೆರಿಗೆ ಪದ್ಧತಿ(ಜಿಎಸ್‌ಟಿ)ಯ ಮೂಲಕ ಒಂದು ರಾಷ್ಟ್ರ-ಒಂದೇ ತೆರಿಗೆ ಎಂದು ಬೀಗುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ದೇಶದ ಅಭಿವೃದ್ಧಿಯ ಕಾಳಜಿಯಿದ್ದಲ್ಲಿ ಒಂದು ರಾಷ್ಟ್ರಕ್ಕೆ ಒಂದೇ ಶಿಕ್ಷಣ ಎಂಬ ನೀತಿ ಜಾರಿಗೆ ತರಲಿ ಎಂದು ಬಹುಜನ ಸಮಾಜ ಪಕ್ಷದ ರಾಜಾಧ್ಯಕ್ಷ ಎನ್.ಮಹೇಶ್ ಹಾಕಿದರು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮೀಸಲಾತಿ ಜನಕ ಛತ್ರಪತಿ ಶಾಹುಮಹಾರಾಜ್ ಜನ್ಮದಿನದ ಅಂಗವಾಗಿ ಕಳೆದ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಶೇ.80 ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.75 ರಷ್ಟು ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಜನ ವಿದ್ಯಾರ್ಥಿ ಸಂಘದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಕ್ಲಾಸ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಪ್ರಗತಿಯಲ್ಲಿ ಮಾನವ ಸಂಪನ್ಮೂಲ ಶಿಕ್ಷಣದಿಂದಲೇ ಅಭಿವೃದ್ಧಿಯಾಗ ಬೇಕಾಗಿದ್ದರಿಂದ ರಾಷ್ಟ್ರಕ್ಕೆ ಸಮಾನ ಶಿಕ್ಷಣ ಪದ್ಧತಿಯ ಅಗತ್ಯವಿದೆ ಎಂದರು.
ಶಾಲೆಗಳಲ್ಲಿ ಸರ್ಕಾರಿ-ಖಾಸಗಿ ಶಾಲೆ ಬೇರೆಯಾಗಿದ್ದರೆ, ಮಾಧ್ಯಮದಲ್ಲಿ ಮಾತೃಭಾಷೆ ಮತ್ತು ಆಂಗ್ಲ ಭಾಷೆ ಎಂಬ ಭೇದವಿದೆ. ಪಠ್ಯಕ್ರಮದಲ್ಲಿ ಕೇಂದ್ರ ಅಧ್ಯಾಯ-ರಾಜ್ಯ ಅಧ್ಯಾಯವೆಂಬ ಪ್ರತ್ಯೇಕತೆಯಿದೆ. ಖಾಸಗಿ ಶಾಲೆಗಳಲ್ಲಿ ಒಂದು ತರಗತಿಗೆ ಒಂದೇ ಕೊಠಡಿ, ಓರ್ವ ಶಿಕ್ಷಕನಿದ್ದರೆ, ಸರ್ಕಾರಿ ಶಾಲೆಯಲ್ಲಿ ಮೂರು ತರಗತಿಗಳಿಗೆ ಒಬ್ಬರೇ ಶಿಕ್ಷಕರಿದ್ದರೆ, ಒಂದು ಕೊಠಡಿಯೊಳಗೆ ಮೂರು ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ ಪರಿಸ್ಥಿತಿಯಿರುವುದರಿಂದ ಪ್ರಧಾನಿಗೆ ಧೈರ್ಯವಿದ್ದಲ್ಲಿ ಒಂದು ರಾಷ್ಟ್ರ-ಒಂದೇ ಶಿಕ್ಷಣ ಪದ್ಧತಿ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.
ಸಮಾನ ಶಿಕ್ಷಣ ನೀತಿ ಜಾರಿಗೆ ತರಲಾಗದೆ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡಿದ ಮಧ್ಯೆರಾತ್ರಿಯಲ್ಲಿಯೇ ಜಿಎಸ್‌ಜಿ ಜಾರಿಗೊಳಿಸಿ ಒಂದು ರಾಷ್ಟ್ರ-ಒಂದೇ ತೆರಿಗೆ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಮತ್ತು ಮನ್‌ಕಿ ಬಾತ್‌ನಲ್ಲಿ ಏಕತೆ ಮಾತನ್ನಾಡುವ ನರೇಂದ್ರ ಮೋದಿ ಅವರೊಬ್ಬ ಮಾರುಕಟ್ಟೆ ಚತುರನಂತೆ ಕಾಣುತ್ತಿದ್ದಾರೆ. ಪ್ರಧಾನಿ ಮಂತ್ರಿಗಳ ಬರೀ ಭರವಸೆಯ ಮಾತನ್ನು ಯಾರೂ ಕೂಡ ನಂಬಬಾರದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯುಪಿಎಸ್ಸಿ(ಐಎಎಸ್) ಪರೀಕ್ಷೆಯ 307ನೇ ರ್‍ಯಾಂಕ್ ವಿದ್ಯಾರ್ಥಿ ಬಿ.ಎಂ ಸಂತೋಷ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.80 ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.75 ರಷ್ಟು ಅಂಕಗಳಿಸಿ ಉತ್ತೀರ್ಣರಾದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಕ್ಲಾಸ್ ಪ್ರತಿಭಾ ಪುರಸ್ಕಾರವನ್ನು ನೀಡಿ ಅಭಿನಂದಿಸಲಾಯಿತು. ನಳಂದ ಬುದ್ಧ ವಿಹಾರದ ಬೋಧಿರತ್ನ ಭಂತೇಜಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಸರ್ಕಾರಿ ಪ್ರಥಮ ದಜೇ ಕಾಲೇಜಿನ ಪ್ರಾಂಶುಪಾಲೆ ನಾಗರತ್ನಮ್ಮ, ಸೋಮನಾಥಪುರ ಜಿಪಂ ಕ್ಷೇತ್ರದ ಸದಸ್ಯ ಎಂ. ಅಶ್ವಿನ್‌ಕುಮಾರ್,
-ಭೈರಾಪುರ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್, ಪೂರೀಗಾಲಿ ಪಿಎಲ್‌ಎನ್ ಕಾಲೇಜಿನ ಪ್ರಾಂಶುಪಾಲ ಬಿ.ರಾಜಣ್ಣ, ಮೂಗೂರು ಹೆಚ್‌ಪಿ ಗ್ಯಾಸ್‌ನ ಮಾಲೀಕರಾದ ರಮ್ಯ ಮಹೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಪುಟ್ಟರಾಜು, ಬಿವಿಎಸ್ ಜಿಲ್ಲಾ ಸಂಯೋಜಕ ಸೋಸಲೆ ಸಿದ್ದರಾಜು, ಬಿಎಸ್ಪಿ ಕ್ಷೇತ್ರ ಉಸ್ತುವಾರಿ ಬಿ.ಆರ್.ಪುಟ್ಟಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ, ಶಿಕ್ಷಕ ಎಂ.ಮಹದೇವಸ್ವಾಮಿ, ಬಿವಿಎಸ್ ತಾಲೂಕು ಸಂಯೋಜಕ ಸಾಗರ್ ಹಾಗೂ ಇನ್ನಿತರರು ಹಾಜರಿದ್ದರು.