ದೇವನಹಳ್ಳಿ: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸದಾಶಿವ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ನೇತೃತ್ವದ ಸರ್ಕಾರವುಜಾರಿಗೊಳಿಸಬೇಕು ಎಂದು ಕರ್ನಾಟಕ ಮಾದಿಗ ದಂಡೋರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಆರೋಪಿಸಿದರು.
ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಕರ್ನಾಟಕ ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಎ.ಜೆ.ಸದಾಶಿವ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿ 2 ದಶಕ ಕಳೆದರೂ ಯಾವುದೇ ಸರ್ಕಾರ ವರದಿ ಜಾರಿಗೊಳಿಸಿಲ್ಲ. ಇದರಿಂದ ಒಳ ಮೀಸಲಾತಿಗಾಗಿ ಕಾಯುತ್ತಿರುವವರಿಗೆ ನಿರಾಸೆಯಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ಆದಷ್ಟು ಬೇಗ ನ್ಯಾ. ಎ.ಜೆ.ಸದಾಶಿವ ಆಯೋಗವನ್ನು ಅಧಿವೇಶನದಲ್ಲಿ ಮಂಡಿಸಿ, ಚರ್ಚೆ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಮೀಸಲಾತಿ ವರ್ಗೀಕರಣ ಮಾಡಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಸೌಲಭ್ಯ ನೀಡಬೇಕು. ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದರು.
ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಮಾದಾರ ಸಮಾಜದ ವಿವಿಧ ಸಂಘಟನೆಗಳ ಮುಖಂಡರ ತೀರ್ಮಾನದಂತೆ ಇಂದು (ಅ.5) ಬೃಹತ್ ಪ್ರತಿಭಟನೆ ಮತ್ತು ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು. ಎ.ಜೆ.ಸದಾಶಿವ ವರದಿ ಅನುಷ್ಠಾನ ತರುವುದು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಜಾತಿವಾರು ಒಳಮೀಸಲಾತಿ ಕಲ್ಪಿಸುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ಕೂಡಲೇ ಸದಾಶಿವ ಆಯೋಗ ಜಾರಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ತಾಪಂ ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ, ಪ್ರತಿಬಾರಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಸರ್ಕಾರಗಳು ಸದಾಶಿವ ಆಯೋಗದ ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. ಇದುವರೆಗೂ ಯಾವ ಸರ್ಕಾರವು ಜಾರಿಗೊಳಿಸಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿಗೊಳಿಸುತ್ತೇವೆಂದು ಹೇಳಿ ಜಾರಿಗೊಳಿಸಲಿಲ್ಲ. ನಮ್ಮ ಸಮುದಾಯ ಬಿಜೆಪಿ ಸರ್ಕಾರ ಜಾರಿಗೊಳಿಸುತ್ತದೆ ಎಂದು ಬೆಂಬಲ ಸೂಚಿಸಿತ್ತು. ಹೀಗೆ ಮನಗೆ ಅನ್ಯಾಯ ಆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಾಗುವುದು. ಇನ್ನಾದರೂ ಎಚ್ಚೆತ್ತುಕೊಂಡು ಜಾತಿವಾರು, ಜನಸಂಖ್ಯೆವಾರು ಒಳ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮಾರಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದೇನಹಳ್ಳಿ ಮುನಿಯಪ್ಪ, ತಾಪಂ ಸದಸ್ಯ ಗೋಪಾಲಸ್ವಾಮಿ, ಮಾಜಿ ಪುರಸಭಾ ಸದಸ್ಯ ಹನುಮಂತಪ್ಪ, ಮಾದಿಗ ದಂಡೋರ ಪ್ರಚಾರ ಸಮಿತಿ ಅಧ್ಯಕ್ಷ ಹೊಸಹುಡ್ಯ ಮುನಿರಾಜು, ತಾಲೂಕು ಅಧ್ಯಕ್ಷ ಕದಿರಪ್ಪ, ಆದಿಜಾಂಭವ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್, ಮತ್ತು ಪದಾಧಿಕಾರಿಗಳು ಇದ್ದರು.