ಭಾಲ್ಕಿ: ತಾಲೂಕಿನ ಆಳಂದಿ ಗ್ರಾಮದಲ್ಲಿ ಆಯೋಜಿಸಿದ್ದ ತಹಶೀಲ್ದಾರ್ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸೂಕ್ತ ಚರಂಡಿ ನಿರ್ಮಾಣ, ಸಿಸಿ ರಸ್ತೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮಸ್ಥರ ಮನವಿ ಮೇರೆಗೆ ತಹಶೀಲ್ದಾರ್ ಕೀರ್ತಿ ಚಾಲಕ ಅವರು ಗ್ರಾಮದ ಸಮಸ್ಯಾತ್ಮಕ ಓಣಿ, ರಸ್ತೆಗಳಲ್ಲಿ ಸಾರ್ವಜನಿಕರೊಂದಿಗೆ ಸಂಚರಿಸಿದರು. ಈ ಸಂದರ್ಭದಲ್ಲಿ ಜನರು ಹೊಲಸು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಮನೆಗಳ ಅಕ್ಕ ಪಕ್ಕ ಸಂಗ್ರಹಗೊಂಡು ದುರ್ನಾತ ಬೀರುತ್ತಿದೆ. ಸಾರ್ವಜನಿಕರಿಗೆ ಓಡಾಡಲು ತುಂಬಾ ತೊಂದರೆ ಆಗುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನೆಮ್ಮದಿಯ ಜೀವನ ನಡೆಸಲು ಕಷ್ಟವಾಗುತ್ತಿರುವ ಬಗ್ಗೆ ತಮ್ಮ ಅಳಲು ತೋಡಿಕೊಂಡರು.
ನಂತರ ತಹಶೀಲ್ದಾರರು ಶಾಲೆ ಕಟ್ಟಡ, ಶೌಚಾಲಯ ರಿಪೇರಿ, ಅಂಗನವಾಡಿ ಕೇಂದ್ರದ ಸಮಸ್ಯೆಗಳ ಬಗ್ಗೆ ಜನರಿಂದ ಆಲಿಸಿ ಪರಿಶೀಲಿಸಿದರು. ಕೆಲ ವೃದ್ಧರು ರೇಶನ್ ಕಾರ್ಡ್, ಮಾಶಾಸನ, ಪಿಂಚಣಿ ಪಡೆಯುವಲ್ಲಿ ಆಗುತ್ತಿರುವ ತೊಂದರೆ ಕುರಿತು ತಹಶೀಲ್ದಾರ್ ಗಮನಕ್ಕೆ ತಂದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಶೀಘ್ರ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.
ಇನ್ನು ಕೆಲ ರೈತರು ಭೂಮಿ ಸರ್ವೇಯಲ್ಲಾಗುತ್ತಿರುವ ವಿಳಂಬ, ತಾಂತ್ರಿಕ ತೊಂದರೆಗಳನ್ನು ತಿಳಿಸಿದರು. ತಹಶೀಲ್ದಾರ್ ನೇತೃತ್ವದ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಎಲ್ಲ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅಹವಾಲನ್ನು ಸ್ವೀಕರಿಸಿದರು. ಜನರ ಸಮಸ್ಯೆ, ಬೇಡಿಕೆಗಳಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಲಾಗುವುದು ಎಂದು ತಹಶೀಲ್ದಾರ್ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ, ಇಸಿಒ ಸಹದೇವ ಜಿ., ಅನಂದ ಬೆಲೂರೆ, ಸೂರ್ಯಕಾಂತ ಬಿರಾದಾರ, ಮಂಗಲಾ ಉಮರ್ಗೆ ಸೇರಿದಂತೆ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಇದ್ದರು.