Advertisement
ಒಂದು ಸಲ ಬಳಕೆಯ ಪ್ಲಾಸ್ಟಿಕ್‌ಗೆ ಸಂಪೂರ್ಣವಾಗಿ ನಿಷೇಧ ಹೇರಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅದರಂತೆ ಬೆಳಗಾವಿ ನಗರದಲ್ಲಿಯೂ ಇಂಥ ಪ್ಲಾಸ್ಟಿಕ್‌ಗೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಆದರೆ ತ್ಯಾಜ್ಯ ಸೇರಿದಂತೆ ವಿವಿಧ ಕಡೆಯಿಂದ ಸಂಗ್ರಹವಾಗುವ ಪ್ಲಾಸ್ಟಿಕ್‌ದಿಂದಲೇ ಪೌಡರ್ ಮಾಡಿ ರಸ್ತೆ ಡಾಂಬರೀಕರಣ ಮಾಡಲು ಪಾಲಿಕೆ ವಿನೂತನ ಯೋಜನೆಗೆ ಕೈಹಾಕಿದೆ.
Related Articles
Advertisement
ರಸ್ತೆ ನಿರ್ಮಿಸಲು ಕಡ್ಡಾಯವಾಗಿ ಈ ಪ್ಲಾಸ್ಟಿಕ್ ಪೌಡರ್ ಬಳಕೆ ಮಾಡಿದರೆ ರಸ್ತೆ ಗಟ್ಟಿಮುಟ್ಟಾಗಿ ಗುಣಮಟ್ಟದಿಂದ ಕೂಡಿರುವುದರ ಜತೆಗೆ ಪಾಲಿಕೆಗೂ ಇದರ ಲಾಭವಾಗಲಿದೆ. ಗುತ್ತಿಗೆದಾರರು ರಸ್ತೆ ನಿರ್ಮಿಸುವಾಗ ಕಡ್ಡಾಯವಾಗಿ ಈ ಪ್ಲಾಸ್ಟಿಕ್ಬಳಸಬೇಕಾಗಿದೆ. ಹೀಗಾಗಿ ಪ್ರತಿ 200 ಮೀಟರ್ ರಸ್ತೆಗೆ 250ರಿಂದ 300 ಕೆಜಿ ಪ್ಲಾಸ್ಟಿಕ್ ಪೌಡರ್ ಬಳಸಬೇಕಾಗಿದೆ. ಗುತ್ತಿಗೆದಾರರಿಗೆ ಪ್ಲಾಸ್ಟಿಕ್ ಪೌಡರ್ ಅವಶ್ಯಕತೆ ಬಹಳಷ್ಟಿದೆ. ಈಗಾಗಲೇ ಬೆಳಗಾವಿಯ ಆಟೋ ನಗರದ ಕಾರ್ಖಾನೆಯೊಂದರಲ್ಲಿ ಪ್ಲಾಸ್ಟಿಕ್ ಪೌಡರ್ ತಯಾರಿಸಲಾಗುತ್ತಿದೆ. ಇಲ್ಲಿಂದ ರಸ್ತೆಗೆ ಅವಶ್ಯಕತೆ ಇರುವ ಪೌಡರ್ ನೀಡಲಾಗುತ್ತಿದೆ. ಈಗ ಸದ್ಯ 500 ಕೆಜಿ ಪೌಡರ್ ತಯಾರಿಸಲಾಗಿದೆ. ಬೆಳಗಾವಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಇನ್ನು ಮುಂದೆ ರಸ್ತೆ ನಿರ್ಮಾಣಕ್ಕೆ ಬಳಸುವ ಯೋಜನೆ ಹೊಂದಲಾಗಿದೆ. ಪೌಡರ್ ತಯಾರಿಕೆ ಯಂತ್ರ ಖರೀದಿ: ಪಾಲಿಕೆ ಇನ್ನು ಮುಂದೆ ಸ್ವಂತ ಖರ್ಚಿನಿಂದಲೇ ಪ್ಲಾಸ್ಟಿಕ್‌ನಿಂದ ಪೌಡರ್ ನಿರ್ಮಾಣ ಯಂತ್ರ ಖರೀದಿಸಲಿದೆ. ಇಲ್ಲಿ ತಯಾರಾಗುವ ಪೌಡರ್ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರಿಗೆ ಮಾರಾಟ ಮಾಡಲಿದೆ. ಇದರಿಂದ ತಮ್ಮ ಯೋಜನೆಯೂ ಕಾರ್ಯಗತವಾಗುವುದರ ಜತೆಗೆ ಪೌಡರ್ ಮಾರಾಟದಿಂದ ಪಾಲಿಕೆಗೂ ಆದಾಯ ಹೆಚ್ಚಲಿದೆ ಎನ್ನುತ್ತಾರೆ ಆರೋಗ್ಯ ಅಧಿಕಾರಿ ಕಲಾದಗಿ. ಈ ಪ್ಲಾಸ್ಟಿಕ್ ಬಳಸಿ ನಿರ್ಮಾಣವಾಗುವ ರಸ್ತೆ ಕಾಮಗಾರಿಗೆ ಅಕ್ಟೋಬರ್ ತಿಂಗಳಲ್ಲಿಯೇ ಚಾಲನೆ ಸಿಗುವ ಸಾಧ್ಯತೆ ಇತ್ತು. ಆದರೆ ಪಾಲಿಕೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ಪಾಲಿಕೆ ಆಯುಕ್ತರ ನಡುವಿನ ಸಂಘರ್ಷದಿಂದಾಗಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ. ವಿಶೇಷತೆ ಏನು?
*ಪ್ಲಾಸ್ಟಿಕ್ ಪೌಡರ್‌ನಿಂದ ಪರಿಸರ ಮಾಲಿನ್ಯ ತಡೆ ಸಾಧ್ಯತೆ
*200 ಮೀಟರ್ ಉದ್ದದ ರಸ್ತೆಗೆ 250ರಿಂದ 300 ಕೆಜಿ ಪ್ಲಾಸ್ಟಿಕ್ ಅವಶ್ಯಕತೆ
*ಮುಂದಿನ ದಿನಮಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಪ್ಲಾಸ್ಟಿಕ್ ಪೌಡರ್ ನಿರ್ಮಾಣ ಕಡ್ಡಾಯವಾಗುವ ಸಾಧ್ಯತೆ
*ಭವಿಷ್ಯದಲ್ಲಿ ಪ್ಲಾಸ್ಟಿಕ್ ಪೌಡರ್ ಬೇಡಿಕೆ ಹೆಚ್ಚಳ
*ಒಂದು ಸಲ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಿದ್ದರಿಂದ ಪಾಲಿಕೆಯಿಂದ ಪ್ಲಾಸ್ಟಿಕ್ ಜಪ್ತಿ
*ಪ್ಲಾಸ್ಟಿಕ್ ಪೌಡರ್ ಬಳಕೆ ಹೆಚ್ಚಾದಂತೆ ಪ್ಲಾಸ್ಟಿಕ್ ಕೊರತೆ ಆಗುವ ಸಾಧ್ಯತೆಯೂ ಉಂಟು ಬೆಳಗಾವಿ ಪಾಲಿಕೆ ವತಿಯಿಂದ ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಪೌಡರ್ ಬಳಸಿ ರಸ್ತೆ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಸಲಕರಣೆಗಳು, ರಸ್ತೆ ನಿರ್ಮಾಣಕ್ಕೆ ಬೇಕಾಗುವ ಪ್ಲಾಸ್ಟಿಕ್ ಪೌಡರ್ ತಯಾರಾಗಿದೆ. ಶೀಘ್ರವೇ ಈ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಈಗ ಪಾಲಿಕೆ ಎದುರಿನ ರಸ್ತೆಯನ್ನು ಪ್ರಾಯೋಗಿಕವಾಗಿ ಮಾಡಲಾಗುವುದು.
ಅಶೋಕ ದುಡಗುಂಟಿ, ಆಯುಕ್ತರು, ಮಹಾನಗರ ಪಾಲಿಕೆ *ಭೈರೋಬಾ ಕಾಂಬಳೆ