Advertisement
ಮಂಗಳವಾರದ ಆಘಾತಕಾರಿ ಸುದ್ದಿಯೆಂದರೆ, ಭಾರತದ ಏಕೈಕ ಅನುಭವಿ ವೇಗಿಯಾಗಿರುವ ಜಸ್‌ಪ್ರೀತ್ ಬುಮ್ರಾ ಕೂಡ ಕಿಬ್ಬೊಟ್ಟೆ ಸ್ನಾಯು ಸೆಳೆತಕ್ಕೆ ಸಿಲುಕಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯುವಂತಾದದ್ದು. ಬಳಿಕ ಅಭ್ಯಾಸದ ವೇಳೆ ಮಾಯಾಂಕ್ ಅಗರ್ವಾಲ್ ಕೂಡ ಚೆಂಡಿನೇಟು ಅನುಭವಿಸಿದ ಘಟನೆ ಸಂಭವಿಸಿದೆ. ಅವರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಗಿದೆ. ಹನುಮ ವಿಹಾರಿ ಬದಲು ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಅಗರ್ವಾಲ್ ಆಡುವ ಸಾಧ್ಯತೆ ಗೋಚರಿಸಿತ್ತು.
Related Articles
Advertisement
ಆರಂಭದಲ್ಲಿ ಇಶಾಂತ್ ಶರ್ಮ ಅಲಭ್ಯತೆ ಯಿಂದ ಶಮಿ, ಬುಮ್ರಾ, ಉಮೇಶ್ ಯಾದವ್ ಭಾರತ ತಂಡದ ಬೌಲಿಂಗ್ ಭಾರ ಹೊತ್ತಿದ್ದರು. ಆದರೆ ಇದೀಗ ಪ್ರತೀ ಪಂದ್ಯಕ್ಕೆ ಒಬ್ಬರಂತೆ ಗಾಯಾಳಾಗಿ ಹೊರಬಿದ್ದ ಕಾರಣ ಈ ಮೂವರ ಸೇವೆಯಿಂದ ಭಾರತ ವಂಚಿತವಾಗಿದೆ. ಅನುಭವಿ ಬೌಲರ್‌ಗಳೇ ತಂಡದಲ್ಲಿಲ್ಲ.
ಹೀಗಾಗಿ ಯುವ, ಅನನುಭವಿ ಹಾಗೂ ವಿದೇಶಿ ನೆಲದಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಟಿ. ನಟರಾಜನ್ ಭಾರತ ತಂಡವನ್ನು ಆಧರಿಸಬೇಕಿದೆ.
ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ರವೀಂದ್ರ ಜಡೇಜ ಬೇರ್ಪಟ್ಟ ಕಾರಣ ಸಿಡ್ನಿ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರ್. ಅಶ್ವಿನ್ ಮೇಲೆ ಹೆಚ್ಚಿನ ಭಾರ ಬಿದ್ದಿತ್ತು. ಇದೀಗ ಅಶ್ವಿನ್ ಕೂಡ ಪೂರ್ತಿ ಫಿಟ್‌ನೆಸ್ ಹೊಂದಿಲ್ಲದಿರುವುದು ಇನ್ನಷ್ಟು ಆತಂಕ ಮೂಡಿಸಿದೆ. ಅವರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಉಳಿದಿರುವ ಸ್ಪಿನ್ನರ್ ಕುಲದೀಪ್ ಯಾದವ್ ಮಾತ್ರ.
ಬ್ಯಾಟಿಂಗ್ ಸಮಸ್ಯೆಯೂ ಉಲ್ಬಣ :
ಭಾರತದ ಬ್ಯಾಟಿಂಗ್ ಸರದಿಯ ಸ್ಥಿತಿಯೂ ಚಿಂತಾಜನಕವಾಗಿದೆ. ಸಿಡ್ನಿ ಟೆಸ್ಟ್‌ನಲ್ಲಿ ಗಾಯದ ಮಧ್ಯೆಯೂ ಕ್ರೀಸ್ ಆಕ್ರಮಿಸಿಕೊಂಡು ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಯಶಸ್ವಿಯಾದ ಹನುಮ ವಿಹಾರಿ ಸೇವೆ ಇನ್ನು ಲಭಿಸದು. ಅಗರ್ವಾಲ್ ಕೂಡ ಏಟು ಮಾಡಿಕೊಂಡಿದ್ದಾರೆ. ಉಳಿದಿರುವ ಇಬ್ಬರೆಂದರೆ ಪೃಥ್ವಿ ಶಾ ಮತ್ತು ವೃದ್ಧಿಮಾನ್ ಸಾಹಾ ಮಾತ್ರ. ಇವರಿಬ್ಬರನ್ನೂ “ಔಟ್ ಆಫ್ ಫಾರ್ಮ್’ನಿಂದಾಗಿ ತಂಡದಿಂದ ಕೈಬಿಡಲಾಗಿತ್ತು. ಬ್ರಿಸ್ಬೇನ್‌ನಲ್ಲಿ ಬಹುಶಃ ಇವರೇ ಗತಿಯಾಗಬೇಕಿದೆ!
ಟೀಮ್ ಇಂಡಿಯಾ ಇಂಜುರಿ ಲಿಸ್ಟ್ ! :
ಆಸ್ಟ್ರೇಲಿಯ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ಮೊದಲ್ಗೊಂಡು ಇಂದಿನ ವರೆಗೆ ಗಾಯದ ಸಮಸ್ಯೆಗೆ ಸಿಲುಕಿದವರ ಪಟ್ಟಿಯದೇ ಒಂದು ದಾಖಲೆ ಆಗಬಹುದೋ ಏನೋ!
- ಇಶಾಂತ್ ಶರ್ಮ: ಐಪಿಎಲ್ ವೇಳೆ ಪಾರ್ಶ್ವ ಸ್ನಾಯು ಸೆಳೆತಕ್ಕೆ ಸಿಲುಕಿ ಆಸ್ಟ್ರೇಲಿಯ ಪ್ರವಾಸವನ್ನೇ ತಪ್ಪಿಸಿಕೊಂಡರು.
- ಭುವನೇಶ್ವರ್ ಕುಮಾರ್: ಇವರಿಗೂ ಐಪಿಎಲ್ ವೇಳೆ ಸ್ನಾಯು ಸೆಳೆತ ಕಾಡಿತು. ಆಸೀಸ್ ಪ್ರವಾಸ ಮರೀಚಿಕೆಯಾಯಿತು.
- ವರುಣ್ ಚಕ್ರವರ್ತಿ: ಐಪಿಎಲ್ ಸಾಧನೆಯಿಂದ ಭಾರತದ ಟಿ20 ತಂಡಕ್ಕೆ ಆಯ್ಕೆಯಾದರು. ಆದರೆ ಭುಜದ ನೋವಿನಿಂದ ಆಸ್ಟ್ರೇಲಿಯ ವಿಮಾನ ತಪ್ಪಿಸಿಕೊಂಡರು.
- ರೋಹಿತ್ ಶರ್ಮ: ಇವರದ್ದು ಒಂಥರ ನಿಗೂಢ ಕೇಸ್ ಆಗಿತ್ತು. ಆದರೆ ಚೇತರಿಸಿಕೊಂಡು ಅಂತಿಮ 2 ಟೆಸ್ಟ್‌ಗೆ ಲಭ್ಯರಾದರು.
- ಮೊಹಮ್ಮದ್ ಶಮಿ: ಅಡಿಲೇಡ್ ಟೆಸ್ಟ್ ವೇಳೆ ಪ್ಯಾಟ್ ಕಮಿನ್ಸ್ ಅವರ ಎಸೆತವೊಂದು ಕೈಗೆ ಬಡಿದ ಪರಿಣಾಮ ಸರಣಿಯಿಂದಲೇ ಹೊರಬಿದ್ದರು.
- ಉಮೇಶ್ ಯಾದವ್: ಟೆಸ್ಟ್ ಪಂದ್ಯದ ಫೀಲ್ಡಿಂಗ್ ವೇಳೆ ಪೆಟ್ಟು ಮಾಡಿಕೊಂಡು ಉಳಿದ ಪಂದ್ಯಗಳಿಂದ ಬೇರ್ಪಟ್ಟರು.
- ಕೆ.ಎಲ್. ರಾಹುಲ್: ಎಂಸಿಜಿ ನೆಟ್ಸ್ ವೇಳೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಮಣಿಗಂಟಿಗೆ ಚೆಂಡು ಬಡಿದು ಹೊರಬಿದ್ದರು.
- ರಿಷಭ್ ಪಂತ್: ಸಿಡ್ನಿ ಟೆಸ್ಟ್ ವೇಳೆ ಕಮಿನ್ಸ್ ಎಸೆತ ಮುಂಗೈಗೆ ಬಡಿದ ಪರಿಣಾಮ ಕೀಪಿಂಗ್ ನಡೆಸಲಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಕ್ಲಿಕ್ ಆದರು.
- 9. ಹನುಮ ವಿಹಾರಿ: ಸಿಡ್ನಿ ಟೆಸ್ಟ್ ಹೀರೋ. ಸೋಮವಾರದ ಬ್ಯಾಟಿಂಗ್ ವೇಳೆ ಗ್ರೇಡ್ 2 ಮಟ್ಟದ ಗಂಭೀರ ಸ್ನಾಯು ಸೆಳೆತಕ್ಕೆ ಸಿಲುಕಿದ್ದಾರೆ.
- 10. ಆರ್. ಅಶ್ವಿನ್: ಸರಣಿಯಲ್ಲಿ 134 ಓವರ್ ಬೌಲಿಂಗ್ ನಡೆಸಿದ್ದು, ಇದೀಗ ಬೆನ್ನುನೋವಿನ ಸಮಸ್ಯೆಗೆ ಒಳಗಾಗಿದ್ದಾರೆ.
- ಮಾಯಾಂಕ್ ಅಗರ್ವಾಲ್: ಮಂಗಳವಾರದ ನೆಟ್ ಪ್ರಾÂಕ್ಟೀಸ್ ವೇಳೆ ಕೈಗೆ ಚೆಂಡಿನೇಟು ಬಿದ್ದಿದೆ. ಸ್ಕ್ಯಾನಿಂಗ್ ವರದಿ ಇನ್ನಷ್ಟೇ ಬರಬೇಕಿದೆ.
- ಜಸ್‌ಪ್ರೀತ್ ಬುಮ್ರಾ: ಕಿಬ್ಬೊಟ್ಟೆಯ ಸ್ನಾಯು ಸೆಳೆತದಿಂದ ನರಳುತ್ತಿದ್ದು, ಅಂತಿಮ ಟೆಸ್ಟ್ ಪಂದ್ಯದಿಂದ ಬೇರ್ಪಟ್ಟಿದ್ದಾರೆ.