ಇಂಡಿ: ರೈತರ ಹಿತ ಕಾಪಾಡಲೆಂದೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸಲಾಗಿದೆ. ಇಂಡಿ, ಚಡಚಣ, ಸಿಂದಗಿ ಭಾಗಗಳ ರೈತರು ಕಬ್ಬು ಕಳುಹಿಸಿ ಕಾರ್ಖಾನೆ ಏಳ್ಗೆಗೆ ಸಹಕರಿಸಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಮರಗೂರ ಗ್ರಾಮದ ಹತ್ತಿರವಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2021-22ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಆರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಲ್ಕೈದು ದಶಕಗಳ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಕನಸಿನೊಂದಿಗೆ ರೈತರು ಷೇರು ಸಂಗ್ರಹ ಮಾಡಿದ್ದರು. ಲೈಸನ್ಸ ಸಹಿತ ಜನ್ಮ ತಳೆದಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆ ಹಲವು ಕಾರಣಗಳಿಂದ ಕಾರ್ಯಾರಂಭ ಮಾಡಲಿಲ್ಲ. ನಾನು ಈ. ಭಾಗದ ರೈತರ ಅನುಕೂಲಕ್ಕಾಗಿ 2017-18 ರಲ್ಲಿ ರಾಜಕೀಯ ಇಚ್ಛಾಶಕ್ತಿ ಹಾಗೂ ರೈತರ ಸಹಕಾರ, ಸರಕಾರದ ನೆರವಿನ ಫಲವಾಗಿ ಮುಚ್ಚಿದ್ದ ಈ ಸಹಕಾರಿ ಸಕ್ಕರೆ ಕಾರ್ಖಾನೆ ಮರುಜೀವ ಪಡೆದು ಇಂದಿಗೆ ಮೂರು ವರ್ಷವಾಯಿತು. ಇಲ್ಲಿಯ ರೈತರ ಸಹಕಾರದಿಂದ ಈ ಕಾರ್ಖಾನೆ ಸುಸೂತ್ರ ನಡೆಯುತ್ತಿದೆ ಎಂದರು.
ಇದನ್ನೂ ಓದಿ:
ಮರಗೂರ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಗೋದಾಮು, ಕ್ಯಾಂಟೀನ್, ವಿಶ್ರಾಂತಿ ಗೃಹ, ಕಬ್ಬು ತೂಕ ಮಾಡುವ ಯಂತ್ರ ಪೂಜೆ, ಸಕ್ಕರೆ ಕಾರ್ಖಾನೆಯಿಂದ ರಾಷ್ಟ್ರೀಯ ಹೆದ್ದಾರಿಯಿಂದ 2 ಕಿ.ಮೀ. ವರೆಗೆ ರಸ್ತೆ ಲೋಕಾರ್ಪಣೆ ಪೂಜೆ ನೆರೆವೇರಿಸಿದರು. ಮಂದ್ರೂಪದ ರೇಣುಕ ಶಿವಾಚಾರ್ಯರು, ಮಾಳಕವಟಗಿಯ ಪಂಚಾಕ್ಷರಿ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಹಾವಿನಾಳದ ಕಲ್ಮೇಶ್ವರ ಶಿವಾಚಾರ್ಯರು ಹಾವಿನಾಳ, ತದ್ದೇವಾಡಿಯ ಚಂದ್ರಶೇಖರ ದೇವರು, ಮಹಾಂತೇಶ ಹಿರೇಮಠ, ಸಕ್ಕರೆ ಕಾರ್ಖಾನೆ ನಿರ್ದೇಶಕ ಬಿ.ಎಂ. ಕೋರೆ, ಸಿದ್ದನಗೌಡ ಬಿರಾದಾರ, ಸುರೇಶಗೌಡ ಪಾಟೀಲ, ದಾನಮ್ಮಗೌಡತಿ ಪಾಟೀಲ, ಜಟ್ಟೆಪ್ಪ ರವಳಿ, ಸದಾಶಿವ ಪ್ಯಾಟಿ, ಕುತಬುದ್ದಿನ್ ಪಾಟೀಲ, ಲಕ್ಷ್ಮಣಗೌಡ ಬಿರಾದಾರ, ಅನಂತ್ ಜೈನ್, ಮಹ್ಮದ್ ಮುಸ್ತಾಕ್ ನಾಯೊRàಡಿ, ಧನ್ಯಕುಮಾರ ಶಹಾ ಇದ್ದರು.