ಬೀಜಿಂಗ್: ಕೋವಿಡ್ ಹುಟ್ಟಿನ ಕುರಿತಾಗಿ ಚೀನ ಸರಕಾರ ರವಿವಾರ ಶ್ವೇತಪತ್ರ ಬಿಡುಗಡೆ ಮಾಡಿದ್ದು, ಸಾಂಕ್ರಾಮಿಕ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ರಾಷ್ಟ್ರಗಳಿಗೆ ಮಾಹಿತಿ ನೀಡಲು ವಿಳಂಬ ಮಾಡಿದ ಆರೋಪವನ್ನು ನಿರಾಕರಿಸಿದೆ. ಡಿಸೆಂಬರ್ 27ರಂದು ವುಹಾನ್‌ನ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಕೋವಿಡ್ ವೈರಸ್ ಪತ್ತೆಯಾಯಿತು. ಆದರೆ, ಆರಂಭದಲ್ಲಿ ಇದನ್ನು ಪರಿಶೀಲಿಸಿದ ತಜ್ಞರು ಇದೊಂದು ವೈರಲ್ ನ್ಯೂಮೋನಿಯಾ ಎಂಬ ತೀರ್ಮಾನಕ್ಕೆ ಬಂದರು. ರಾಷ್ಟ್ರೀಯ ಆರೋಗ್ಯ ಆಯೋಗದ ತಜ್ಞರು ಜನವರಿ 19ರಂದು ಮೊದಲ ಬಾರಿಗೆ ಈ ಸೋಂಕು ಮಾನವನಿಂದ ಮಾನವನಿಗೆ ಹರಡುವುದನ್ನು ಪತ್ತೆ ಹಚ್ಚಿದರು. ಇದಕ್ಕೂ ಮೊದಲು, ಈ ಬಗ್ಗೆ ಸಾಕಷ್ಟು ಪುರಾವೆಗಳು ದೊರಕಿರಲಿಲ್ಲ. ಬಾವಲಿಗಳು ಮತ್ತು ಚಿಪ್ಪುಹಂದಿಗಳು ಸೋಂಕು ಹರಡುವ ಮಧ್ಯವರ್ತಿ ಮೂಲ ಗಳಾಗಿರಬಹುದೆಂದು ಶಂಕಿಸಲಾಗಿದ್ದರೂ ಈ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಶ್ವೇತಪತ್ರದಲ್ಲಿ ತಿಳಿಸಿದೆ. ಸೋಂಕು ಉಗಮವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಚೀನ ವಿರುದ್ಧ ಹಲವು ರಾಷ್ಟ್ರಗಳು ಸಿಡಿದು ನಿಂತಿದ್ದು, ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿವೆ.