ದೇವನಹಳ್ಳಿ: ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕೆಂದು ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಕಾರ್ಯಕರ್ತರಿಗೆ ಸೂಚಿಸಿದರು. ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ನಡ್ಡಾ,ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಬಂದಿರುವುದರಿಂದ ಸುವರ್ಣಯುಗ ಬರಲಿದೆ.ಪ್ರತಿ ಕಾರ್ಯಕರ್ತರು ಪಕ್ಷ ಸಂಘಟನೆಯ ಮೂಲಕ ಪಕ್ಷವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಜನಪರ ಕಾರ್ಯಗಳನ್ನು ಮಾಡುತ್ತಿದ್ದು,ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದರು.
ಅದ್ಧೂರಿ ಸ್ವಾಗತ: ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನೇಮಕವಾದ ನಂತರ, ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಜೆ.ಪಿ ನಡ್ಡಾ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿ ಗೋವಿಂದ ಕಾರ ಜೋಳ, ಕಂದಾಯ ಸಚಿವ ಆರ್.ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಸೇರಿದಂತೆ ಇತರ ನಾಯಕರು ನಡ್ಡಾ ಅವರನ್ನು ಬರ ಮಾಡಿಕೊಂಡರು.
ಈ ವೇಳೆ ಸಚಿವ ಆರ್.ಅಶೋಕ್ ಮಾತನಾಡಿ, ಅನರ್ಹ ಶಾಸಕರಿಂದ ಈ ಸರ್ಕಾರ ಬಂದಿದೆ. ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುವವರ ವಿರುದ್ಧ ಶಿಸ್ತು ಕ್ರಮ ಕೈ ಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ, ಪಕ್ಷ ಸಂಘಟನೆ ಹಾಗೂ ಉಪ ಚುನಾವಣೆಯ ಬಗ್ಗೆ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಚರ್ಚಿಸಿದ್ದೇವೆ.
ಉಪ ಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರ ಗಳಲ್ಲಿ ಗೆಲುವಿನ ಬಾವುಟ ಹಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ ರಾಜಣ್ಣ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ನಾಗವೇಣಿ, ಮುಖಂಡ ಹೈಕೋರ್ಟ್ ವಕೀಲ ಡಿಸಿ ನಾರಾಯಣಸ್ವಾಮಿ, ಗೋಕರೆ ಗೋಪಾಲ್ ಇದ್ದರು.
ಉಪಚುನಾವಣೆ ಚರ್ಚೆ: ಈ ವೇಳೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೆ.ಪಿ ನಡ್ಡಾ ವಿಐಪಿ ಲಾಂಚ್‌ನಲ್ಲೇ ಆರ್.ಅಶೋಕ್, ನಳೀನ್ ಕುಮಾರ್ ಕಟೀಲ್,ಗೋವಿಂದ ಕಾರ ಜೋಳ ಅವರ ಜೊತೆ ಸುಮಾರು ಒಂದು ಗಂಟೆ ಕಾಲ ಉಪಚುನಾವಣೆಗಳ ಕಾರ್ಯತಂತ್ರಗಳ ಬಗ್ಗೆ ಮಾತು ಕತೆ ನಡೆಸಿದರು ಎನ್ನಲಾಗಿದೆ.