ಏ ಸ್ಕ್ವೇರ್ ಪ್ಲಸ್ ಬೀ ಸ್ಕ್ವೇರ್ ಈಸ್ ಈಕ್ವಲ್ ಟೂ a2+b2
ಗಣಿತ ಮೇಷ್ಟ್ರಿನ ಅಗಣಿತ ಸೂತ್ರಗಳನ್ನು ಬಿಡಿಸುತ್ತ ಕಪ್ಪು ಹಲಗೆಯ ಮೇಲೆ ಸುಣ್ಣದ ಕಡ್ಡಿ ಓಡುತ್ತಿದೆ. ಸುಲೇಖಾಳಿಗೋ ಗಣಿತವೆಂದರೆ ಕನಸಲ್ಲೂ ಕಾಡುವ ಪ್ರೇತ. ಮನಸ್ಸು ನಿದ್ರಿಸು ಎಂದು ಕೂಗುತ್ತಿದೆ. ಕಷ್ಟಪಟ್ಟು ಎಚ್ಚರವಿರಲು ಪ್ರಯತ್ನಿಸುತ್ತಿದ್ದಾಳೆ, ಊಹುಂ… ರೆಪ್ಪೆಗಳು ಜಗ್ಗಿ ಕೂಡುತ್ತಿವೆ. ಇಂಥ ಸಮಯದಲ್ಲಿ ತಂಗಾಳಿ ಬೀಸಿದರೆ ಹೇಗೆ ಹೇಳಿ?! ಮನುಷ್ಯ ಸಹಜವಾಗಿಯೇ ಆ ಕುಳಿರ್ಗಾಳಿ ಬೀಸಿದೆಡೆಗೆ ಸುಲೇಖಾಳ ಕತ್ತು ಹೊರಳಿದೆ. ಪಕ್ಕದಲ್ಲಿದ್ದ ಮೂರೂವರೆ ಅಡಿಯ ಕಿಟಕಿಯಿಂದ ಇಣುಕುತ್ತಿದ್ದ ಆಕಡೆಯ ಜಗತ್ತು ಸುಲೇಖಾಳಿಗೆ ಇಲ್ಲಿನ ಪಾಠಕ್ಕಿಂತ ಆಸಕ್ತಿಕರ ಎನಿಸುತ್ತಿದೆ. ತನ್ನ ಕತ್ತನ್ನು ಬಲಬದಿಗೆ ವಾಲಿಸಿ, ಹುಬ್ಬು ಕೂಡಿಸಿ ಕಣ್ಣು ಚುರುಕಾಗಿಸಿದ್ದಾಳೆ.
ಸುಲೇಖಾ 10ನೇ ತರಗತಿ ಅಭ್ಯಸಿಸುತ್ತಿರುವ ಬಾಲೆ, ಓದಿನಲ್ಲೇನೂ ಮುಂದಲ್ಲ , ಹರಕೆ ಹೊತ್ತು ಉತ್ತೀರ್ಣವಾಗುವವರ ಜಾತಿ. ಸೈಕಲ್ ಎಂದರೆ ವಿಪರೀತ ಹುಚ್ಚು. ಊರಿನ ಸಾಹುಕಾರನ ಮನೆಗೆ ಕೂಲಿಗಾಗಿ ಹೋಗುತ್ತಿದ್ದ ತಾಯಿಯೊಂದಿಗೆ ಬಿಡುವಿನ ವೇಳೆಯಲ್ಲಿ ಸಾಥ್ ನೀಡುತ್ತಿದ್ದವಳು ಆ ಸಾಹುಕಾರನ ಮಗಳ ಸೈಕಲ್ ಅನ್ನು ಕದ್ದು ಸವಾರಿ ಮಾಡುತ್ತ ಇದರ ಹುಚ್ಚು ಹಿಡಿಸಿಕೊಂಡವಳು. 10 ಕಿ.ಮೀ. ದೂರದ ಶಾಲೆಗೆ ಕಾಡು-ಹೊಲಗದ್ದೆಯ ದಾಟಿ ನಡೆದು ಬರುತ್ತ “ಇನ್ನು ನಡೆಯಲಾಗದಮ್ಮಾ, ಸೈಕಲ್ ಕೊಡಿಸು’ ಎಂದು ಕೇಳಿ ತಾಯಿಯಿಂದ ಮುಖಮೂತಿಯ ಭೇದವಿಲ್ಲದೆ ಪೆಟ್ಟುತಿಂದವಳು. ಈ ಹಿನ್ನಲೆಯ ಸುಲೇಖಾಳಿಗೆ ಕಿಟಕಿಯಾಚೆಯ ತುಂಡು ರಸ್ತೆಯಲ್ಲಿ ತಂದೆ, ಮಗಳಿಗೆ ಸೈಕಲ್ ಕಲಿಸುತ್ತಿರುವುದು ಕಂಡಿದೆ.
ಅವಳ ಕಣ್ಣ ಕಿನಾರೆಯಲ್ಲಿ ನೀರ ಹನಿ ಉದುರಲು ಅಣಿಯಾಗಿ ನಿಂತಿದೆ. ಆಂತರ್ಯದಲ್ಲಿ ತನ್ನ ವಯಸ್ಸಿಗೆ ಒತ್ತಡವೆನಿಸುವ ಆಲೋಚನೆಗಳು ಹರಿದಾಡಲು ಶುರುವಾಗಿವೆ. ಅಪ್ಪ ಎನ್ನುವ ಜೀವಿ ಎಷ್ಟು ಮುಖ್ಯ, ನಮ್ಮ ಸಂಸಾರವು ಒಂದು ಮನೆಯಿದ್ದಂತೆ, ಅಪ್ಪ ಎನ್ನುವವನು ಕಿಟಕಿ, ಮನೆಗೆ ಕದವಿಲ್ಲದಿದ್ದರೂ ಜೀವನ ಸಾಗಿಸಬಹುದು, ಗಾಳಿ-ಬೆಳಕೀಯುವ ಕಿಟಕಿಯಿಲ್ಲದೆ? ಬದುಕು ಬರಿಯ ಕತ್ತಲು. ಅವನಿದಿದ್ದರೆ ನನಗೂ ಸೈಕಲ್ ಭಾಗ್ಯವಿರುತಿತ್ತೇನೋ, ಸೈಕಲ್‌ನಲ್ಲಿ ನಾನು ನನ್ನ ಶಾಲೆಯ ಬಯಲೆಲ್ಲ ಸುತ್ತುತ್ತಿದ್ದೆ, ಈ ತುಂಡು ರಸ್ತೆಯ ಇಕ್ಕೆಲಗಳಲ್ಲಿ ಒಣಗಿ ನಿಂತ ಹುಲ್ಲು ಮೇಯಲು ಬರುವ ಗೋವುಗಳನ್ನು “ಟ್ರನ್ ಟ್ರಿನ್’ ಎಂದು ಹಾರ್ನ್ ಮಾಡುತ್ತ ಹೆದರಿಸಿ ಬಿಡುತ್ತಿದ್ದೆ, ಈ ಮರಗಳ ಸುತ್ತ ಗಿರಕಿ ಹೊಡೆಯುತ್ತಿದ್ದೆ, ಮನೆಯ ಮಾರ್ಗ ಮಧ್ಯೆ ಸಿಗುವ ಕಾಡಿನ ದರಗಿನ ಪರ್ಣಸಾಗರದ ನಡುವೆ ಚರ್… ಎನ್ನುತ್ತ ಚಕ್ರ ಹಾರಿಸುತ್ತ ಹೋಗುತ್ತಿದ್ದೆ ಎಂದು ಕನಸು ಕಾಣುತ್ತಿರುವಾಗಲೇ ಮರದ ಮುರುಕು ಕಿಟಕಿ ಢಬ್ ಎನ್ನುತ್ತ¤ ಮುಚ್ಚಿ ಗೋಡೆಯ ಪುಡಿ ಉದುರಿಸಿತು. ಸುಲೇಖಾ ಕಣ್ಣು ಮುಚ್ಚಿದಳು. ನನ್ನ ಬದುಕೂ ಹೀಗೆಯಲ್ಲವೇ ಹೊರಗಿನ ಒಳಹನ್ನು ತಿಳಿಯುವಾಗಲೆಲ್ಲ ಕಿಟಕಿ ಮುಚ್ಚಿದೆ, ಕಿಟಕಿಯಿಲ್ಲದ (ಅಪ್ಪನಿಲ್ಲದ) ಮನೆಯಲ್ಲಿರುವಾಗ ಅದರಾಚೆಗೇನಿದೆ ಎನ್ನುವ ಕೌತುಕದ ಕುದಿಯಲ್ಲಿಯೇ ನಾವು ಬೇಯುತ್ತೇವೆಯೇ ಹೊರತು ಹೊರಗಿನದನ್ನು ನೋಡುವ ಪ್ರಮೇಯಕ್ಕೆ ನಾಂದಿಯೇ ಹಾಡುವುದಿಲ್ಲ ಎನ್ನುವ ಸ್ವಗತದೊಡನೆ ಕಣ್ಣಿನಿಂದ ಮುತ್ತು ಜಾರಿ ಕೆನ್ನೆಯ ಮೇಲೆ ಉದುರುತ್ತಿವೆ.
ಅಷ್ಟರಲ್ಲಿ “ಸುಲೇಖಾ’ ಎಂದು ಯಾರೋ ಕೂಗಿದ ದನಿ. ನಿಸ್ಸಂದೇಹವಾಗಿ ಇದು ಗಣಿತ ಮೇಷ್ಟ್ರೇ. ಭಯದಲ್ಲಿ ಮು¨ªೆಯಾದವಳು ಕಣ್ಣು ಬಿಡುವ ಬದಲು ಇನ್ನೂ ಬಿಗಿಯಾಗಿ ಮುಚ್ಚಿದಳು. ಮಗದೊಮ್ಮೆ “ಮಿಸ್. ಸುರೇಖಾ’ ಅರೆರೆ… ಇದು ಮೇಷ್ಟ್ರ ಧ್ವನಿಯಲ್ಲ ಹೆಂಗಸಿನ ಇಂಪಾದ ದನಿ, ಕಣ್ಣು ಬಿಟ್ಟ ಸುಲೇಖಾಳ ಎದುರುನಿಂತಿರುವುದು ಉಪಚಾರಕ್ಕಾಗಿ ಬಂದ ಗಗನಸಖೀ, ಅರೆಕ್ಷಣ ದಿಗ್ಭ್ರಾಂತಳಾಗಿ ಕೂತವಳು ಮೆಲ್ಲನೆ ವಾಸ್ತವ ಜಗತ್ತಿಗೆ ಮರಳುತ್ತಿದ್ದಾಳೆ.
ಏಶಿಯನ್ ಗೇಮ್ಸ್‌ನ ಸೈಕಲ್ ಮ್ಯಾರಥಾನ್‌ನ ಭಾರತದ ಪ್ರತಿನಿಧಿ ಸ್ಪರ್ಧಿಯಾಗಿದ್ದ ಸುಲೇಖಾ ಪ್ರಸ್ತುತ ಇದಕ್ಕಾಗಿಯೇ ವಿಮಾನದಲ್ಲಿದ್ದಾಳೆ. ತನ್ನದು ಕನಸಲ್ಲ. ಶಾಲಾ ದಿನಗಳಲ್ಲಿನ ತನ್ನ ಯೋಚನೆಗಳ ಮೆಲುಕು ಎಂದು ಜ್ಞಾಪಿಸಿಕೊಳ್ಳುತ್ತ ತಾನು ಅಂದು ಆಲೋಚಿಸಿದ್ದು ತಪ್ಪು ನಾವು ಪ್ರಪಂಚಕ್ಕೆ ತೆರೆದುಕೊಳ್ಳುವುದು ಮುಖ್ಯ. ಅದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ನಾವೇ ಕಂಡುಕೊಳ್ಳಬೇಕು. ಮನೆಗೆ ಕಿಟಕಿಯಿಲ್ಲದ್ದಿದ್ದರೇನಂತೆ-ಸೂರನ್ನಾದರೂ ಕಿತ್ತು ಹೊರನೋಡಲೇಬೇಕು ಎಂದು ಸಂಕಲ್ಪಿಸುತ್ತ ಮತ್ತೆ ವಿಮಾನದ ದುಂಡು ಕಿಟಕಿಯಿಂದ ಇಣುಕುತ್ತಾಳೆ. ಸುಲೇಖಾ ಈಗಾಗಲೇ ಭೂಮಿಗೆಟುಕದ ಎತ್ತರಕ್ಕೆ ಏರಿದ್ದಾಳೆ, ಇನ್ನೂ ಮೇಲೆನೋಡುವ ನಿರ್ಧಾರ ಮಾಡಿದ್ದಾಳೆ. ಆ ಕಿಟಕಿಯಾಚೆಗಿದ್ದದ್ದು ಬರಿಯ ಅನಂತತೆ.
ವಿಭಾ ಡೋಂಗ್ರೆ ಆಳ್ವಾಸ್ ಕಾಲೇಜು, ಮೂಡಬಿದ್ರಿ