Advertisement

Sea; ಕಪ್ಪಾದ ಕರಾವಳಿ ಕಡಲ ಒಡಲು; ಆಳಸಮುದ್ರದಲ್ಲಿ ಭಾರೀ ಗಾಳಿ

01:44 AM Aug 23, 2024 | Team Udayavani |

ಮಲ್ಪೆ: ಆಳಸಮುದ್ರದಲ್ಲಿ ಬುಧವಾರ ರಾತ್ರಿಯಿಂದ ಭಾರೀ ಗಾಳಿ ಬೀಸಿರುವುದರಿಂದ ಮೀನುಗಾರಿಕೆಗೆ ತೆರಳಿದ ಬಹುತೇಕ ಬೋಟುಗಳು ಸಮೀಪದ ಬಂದರು ಪ್ರವೇಶಿಸಿವೆ. ರಾತ್ರಿ ಬೆಳಗಾಗುವುದರೊಳಗೆ ಸಮುದ್ರದ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಮೀನುಗಾರರು ಕಂಗಾಲಾಗಿದ್ದಾರೆ.

Advertisement

ವಿಪರೀತ ಗಾಳಿಯಿಂದಾಗಿ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿದ್ದು, ಇದರಿಂದಾಗಿ ಸಮುದ್ರದ ಆಳದಲ್ಲಿರುವ ಕಪ್ಪು ಕೆಸರು ಮಿಶ್ರಿತ ನೀರು ಮೇಲೆ ಬಂದಿದೆ ಎನ್ನಲಾಗಿದೆ. ಇದರಿಂದ ಮೀನುಗಾರಿಕೆಗೆ ತೆರಳಿದ್ದವರು ಸಮುದ್ರವನ್ನು ಕಂಡು ಆಘಾತಗೊಂಡಿದ್ದಾರೆ. ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಗುರುವಾರ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಮಲ್ಪೆ ಬಂದರಿನ ಬಹುತೇಕ ಆಳಸಮುದ್ರ ದೋಣಿಗಳು ಕಾರವಾರ ಸಹಿತ ಇತರ ಬಂದರುಗಳನ್ನು ಪ್ರವೇಶಿಸಿವೆ.

ಸಮುದ್ರದಲ್ಲಿ ತೂಫಾನ್‌ ಆದಾಗ ಈ ರೀತಿಯ ಕಪ್ಪು ಕೆಸರು ಮಿಶ್ರಿತ ನೀರು ಕಂಡು ಬರುತ್ತದೆ. ಈ ಬಾರಿ ಇದು ಹೆಚ್ಚಾಗಿದ್ದು, ತೂಫಾನ್‌ ಉಂಟಾಗುವ ಸಾಧ್ಯತೆ ಜಾಸ್ತಿ ಇದೆ. ಸಮುದ್ರದ ನೀರಿನ ಒತ್ತಡದಿಂದಾಗಿ ಮೀನುಗಾರಿಕೆಗೆ ಬಲೆ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಹುತೇಕ ಮೀನುಗಾರರು ತಮ್ಮ ಬೋಟನ್ನು ದಡ ಸೇರಿಸಿದ್ದಾರೆ. ಇಂಥ ಪರಿಸ್ಥಿತಿ ಆ. 24ರ ವರೆಗೆ ಇರುವ ಸಾಧ್ಯತೆ ಇದೆ ಎಂದು ಮೀನುಗಾರರಾದ ಕೃಷ್ಣ ಎಸ್‌. ಸುವರ್ಣ ತಿಳಿಸಿದ್ದಾರೆ.

ಗಂಗೊಳ್ಳಿ: ಗುಜ್ಜಾಡಿ ಗ್ರಾಮದಲ್ಲೂ ಸಮುದ್ರ ತೀರದಲ್ಲೂ ಕಡಲ್ಕೊರೆತ ಜೋರಾಗಿದೆ. ತೀರಕ್ಕೆ ಹೊಂದಿಕೊಂಡಂ ತಿರುವ 20ಕ್ಕೂ ಮಿಕ್ಕಿ ಮನೆ ಮಂದಿಆತಂಕದಲ್ಲಿಯೇ ದಿನ ಕಳೆಯುವಂ ತಾಗಿದೆ. ಹೊಸಾಡು ಗ್ರಾಮದ ಕಂಚು ಗೋಡು, ತ್ರಾಸಿ, ಮರವಂತೆ ಭಾಗದಲ್ಲೂ ಕಡಲಬ್ಬರ ಜೋರಾಗಿದ್ದು, ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಕಾಪುವಿನಲ್ಲೂ ಸಮುದ್ರ ಪ್ರಕ್ಷುಬ್ಧ
ಕಾಪು: ಕಾಪು ಬೀಚ್‌ನಲ್ಲಿ ಗುರುವಾರ ಮಧ್ಯಾಹ್ನ ದಿಢೀರನೆ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದಿಂದ ಎದ್ದ ಬೃಹತ್‌ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಬೀಚ್‌ ಪಕ್ಕದ ಅಂಗಡಿ, ಶೌಚಾಲಯ, ಸಮುದ್ರ ದಂಡೆ ಮತ್ತು ಕಲ್ಲು ಬೆಂಚುಗಳಿಗೆ ನೀರು ಅಪ್ಪಳಿಸಿದೆ.

Advertisement

ಲೈಟ್‌ಹೌಸ್‌ ಸುತ್ತಲಿನ ಬಂಡೆ, ಲೈಟ್‌ಹೌಸ್‌ನ ಬಂಡೆ ಮತ್ತು ದಡಕ್ಕೆ ಬೃಹತ್‌ ಅಲೆಗಳು ಅಪ್ಪಳಿಸುತ್ತಿದ್ದು ಲೈಟ್‌ನ ಸುತ್ತಲೂ ದ್ವೀಪ ದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಡಲ ಅಬ್ಬರಕ್ಕೆ ಬೆದರಿದ ಸ್ಥಳೀಯ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮನೆಗೆ ತೆರಳಿದ್ದಾರೆ. ಬೀಚ್‌ಗೆ ಆಗಮಿಸಿದ ಪ್ರವಾಸಿಗರೂ ವಾಪಸ್‌ ಹೋಗಿದ್ದಾರೆ.

ಗಂಗೊಳ್ಳಿ: ತೀವ್ರ ಕಡಲ್ಕೊರೆತ
ಗಂಗೊಳ್ಳಿ: ಗಂಗೊಳ್ಳಿಯ ಲೈಟ್‌ಹೌಸ್‌ ಸಮೀಪದ ಮಡಿ ಎಂಬಲ್ಲಿ ಗುರುವಾರ ಕಡಲ್ಕೊ ರೆತ ತೀವ್ರಗೊಂಡಿದೆ. ಕಡಲಿನ ಅಲೆಗಳ ಆರ್ಭಟಕ್ಕೆ ತೀರ ಪ್ರದೇಶದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಕೆಲವು ದಿನಗಳಿಂದ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಇದ್ದರೂ ಕಡಲ್ಕೊರೆತ ತೀವ್ರತೆ ಪಡೆದುಕೊಂಡಿದೆ. ತೀರದಲ್ಲಿ ನಿಲ್ಲಿಸಿರುವ ದೋಣಿಗಳು ಕಡಲ ಪಾಲಾಗುವ ಭೀತಿ ಎದುರಾಗಿದ್ದು, ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next