ಅನಗೊಂಡನಹಳ್ಳಿ: ಸಮೇತನಹಳ್ಳಿ ಗ್ರಾಪಂ ವ್ಯಾಪ್ತಿಯಕೆ.ಮಲ್ಲಸಂದ್ರ ಗ್ರಾಮದ ಬಸವೇಶ್ವರ ದೇವಾಲಯದ ಮುಂಭಾಗದ ರಸ್ತೆಯ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮಳೆ ಬಂದರೆ ರಸ್ತೆಯ ಮೇಲೆ ಕೊಳಚೆ ನೀರು ಹರಿಯುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದೆ.
ಒಂದು ತಿಂಗಳಿನಿಂದ ಚರಂಡಿಯಲ್ಲಿ ರಸ್ತೆ ಬದಿಯ ತ್ಯಾಜ್ಯ ಹಾಗೂ ಮಣ್ಣು ತುಂಬಿಕೊಂಡಿದ್ದು, ಮಳೆ ಬಂದರೆ ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿಯಲ್ಲಿ ನೀರು ನಿಂತಲ್ಲೇ ನಿಂತಿರುವುದರಿಂದ ಕಸವು ಸೇರಿ ಕೊಳೆಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಸುತ್ತಮುತ್ತಲಿನ ಮನೆಗಳ ವೃದ್ಧರು ಹಾಗೂ ಮಕ್ಕಳು ಡೆಂಗ್ಯು ಜ್ವರದಿಂದ ಬಳಲುವಂತಾಗಿದೆ. ಇದಕ್ಕೆ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರ ಬೇಜವಾಬ್ದಾರಿ ತನವೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.
ಸಾಂಕ್ರಾಮಿಕ ರೋಗ ಭೀತಿ: ನಿತ್ಯ ಇದೇ ರಸ್ತೆ ಮೇಲೆ ಗ್ರಾಪಂ ಸದಸ್ಯರು ಓಡಾಡುತ್ತಾರೆ. ಆದರೆ ಅವರಿಗೆ ಈ ಸಮಸ್ಯೆಯನ್ನು ಬಗೆಹರಿಸುವ ಮನಸ್ಸಿಲ್ಲದಾಗಿದೆ. ನೂತನವಾಗಿ ಸಿಸಿ ಚರಂಡಿ ನಿರ್ಮಾಣ ಮಾಡಿದ್ದರೂ ಸಹ ಸರಿಯಾದ ನಿರ್ವಹಣೆ ಇಲ್ಲದೇ ಚರಂಡಿಯಲ್ಲಿ ಕಲುಷಿತ ನೀರು ಸೇರಿ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಸೃಷ್ಟಿಸಿದೆ.
ಔಷಧಿ ಸಿಂಪಡಣೆ ಮಾಡಿಲ್ಲ : ಪಂಚಾಯಿತಿ ಅಧಿಕಾರಿಗಳು ಚರಂಡಿ ಸ್ವಚ್ಛತಾ ಕಾರ್ಯ ಮಾಡಿಲ್ಲ. ಔಷಧಿ ಸಿಂಪಡಿಸಿಲ್ಲ. ದೇವಾಲಯದ ಬಳಿ ಹಳೆಯದಾದ ತಿಪ್ಪಾಳಕುಂಟೆ ಇದ್ದು ಗ್ರಾಮದ ಅರ್ಧದಷ್ಟು ಚರಂಡಿಯ ಕೊಳಚೆನೀರು ಈ ಕುಂಟೆ ಸೇರುತ್ತಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿದೆ. ವೈದ್ಯಾಧಿಕಾರಿಗಳು ಸಹ ಆಸ್ಪತ್ರೆಗೆ ಹೋದ ರೋಗಿಗಳಿಗೆ ಮಲ್ಲಸಂದ್ರ ಗ್ರಾಮದಲ್ಲಿ ಡೆಂ à ಪ್ರಕರಣಗಳು ಹೆಚ್ಚಾಗಿದ್ದು, ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
ಸ್ವಚ್ಛ ಮಾಡಲು ಆಗುತ್ತಿಲ್ಲ : ಚರಂಡಿ ಸಮಸ್ಯೆ ವಿಚಾರವಾಗಿ ಪತ್ರಿಕೆಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಸದಸ್ಯ ರವಿ, ಗ್ರಾಮ ಪಂಚಾಯಿತಿಯಿಂದ ಬಂದ ಅನುದಾನದಲ್ಲಿ ಸಿಸಿ ಚರಂಡಿ ನಿರ್ಮಾಣ ಮಾಡಲಾಗಿದೆ. ಸರ್ಕಾರಿ ತಿಪ್ಪಾಳಕುಂಟೆ ಜಾಗ ಒತ್ತುವರಿ ಹಾಗೂ ಚರಂಡಿ ಮೇಲೆ ಹಲವಾರು ಮಂದಿ ಮನೆಗಳನ್ನು ನಿರ್ಮಿಸಿಕೊಂಡಿರುವುದರಿಂದ ಚರಂಡಿ ಸ್ವತ್ಛ ಮಾಡಲು ಆಗುತ್ತಿಲ್ಲ ಎಂದು ಹೇಳಿದರು.
–ಮಹೇಶ್ ಆರಾಧ್ಯ