Advertisement

ವಾಡಿ ಸುತ್ತ ಸೋಂಕಿತರ ಸೀಲ್‌ಡೌನ್‌ ತಾಂಡಾಗಳು

07:23 AM Jun 11, 2020 | Team Udayavani |

ವಾಡಿ: ಪಟ್ಟಣದ ಸುತ್ತಲೂ ಮಹಾಮಾರಿ ಕೋವಿಡ್ ಸೋಂಕಿತ ಸೀಲ್‌ಡೌನ್‌ ತಾಂಡಾಗಳು ತಲೆ ಎತ್ತಿದ್ದು, ಪ್ರಾಣಕಂಟಕ ಸಾಂಕ್ರಾಮಿಕ ರೋಗದ ಕಾನೂನು ಧಿಕ್ಕರಿಸಿ ಜನರು ನಿರ್ಭಯವಾಗಿ ಮಾರುಕಟ್ಟೆಗೆ ಆಗಮಿಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

Advertisement

ವಿಶೇಷ ರೈಲುಗಳ ಮೂಲಕ ಆಗಮಿಸಿದ ಮಹಾರಾಷ್ಟ್ರದ ಸುಮಾರು ಹತ್ತು ಸಾವಿರ ವಲಸೆ ಕಾರ್ಮಿಕರಲ್ಲಿ ಶೇ. 99ರಷ್ಟು ತಾಂಡಾ ನಿವಾಸಿಗಳಿದ್ದಾರೆ. ಇವರೆಲ್ಲರೂ 14 ದಿನಗಳ ಸರಕಾರಿ ಕ್ವಾರಂಟೈನ್‌ ಮುಗಿಸಿ, ಮನೆಗೆ ಬಂದು ಐದಾರು ದಿನಗಳ ನಂತರ ಬಹುತೇಕರಲ್ಲಿ ಸೋಂಕು ದೃಢಪಟ್ಟಿರುವ ವರದಿ ಪ್ರಕಟವಾಗಿದ್ದು, ಎಲ್ಲೆಡೆ ಭೀತಿ ಹೆಚ್ಚಿಸಿದೆ.

ಸದ್ಯ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ 10ಕ್ಕೂ ಹೆಚ್ಚು ತಾಂಡಾಗಳನ್ನು ಸೀಲೌxನ್‌ ಮಾಡಲಾಗಿದೆ. ಜನರ ಓಡಾಟ ನಿಲ್ಲಿಸಲು ಪೊಲೀಸ್‌ ಭದ್ರತೆ ಒದಗಿಸದೇ, ಮುಳ್ಳಿನ ಬೇಲಿ ಹಚ್ಚಿ ನಾಮಕೇವಾಸ್ತೆ ಸೀಲೌಡೌನ್‌ ಮಾಡಿದ್ದಾರೆ ಎಂದು ವಿವಿಧ ತಾಂಡಾಗಳ ಮುಖಂಡರು ತಾಲೂಕು ಆಡಳಿತದ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಲಾಡ್ಲಾಪುರ ಗ್ರಾ.ಪಂ ವ್ಯಾಪ್ತಿಯ ಚಾಜುನಾಯಕ ತಾಂಡಾದಲ್ಲಿ-18, ವಾಚುನಾಯಕ ತಾಂಡಾದಲ್ಲಿ-9 ಜನರಿಗೆ ಸೋಂಕು ದೃಢಪಟ್ಟಿದರೆ, ಕಮರವಾಡಿ ಗ್ರಾ.ಪಂ ವ್ಯಾಪ್ತಿಯ ದೇವಾಪುರ ತಾಂಡಾ-18, ರಾಮಾನಾಯಕ ತಾಂಡಾ-29, ಮೋಳಿ ತಾಂಡಾ-4, ಯಾಗಾಪುರ ಗ್ರಾ.ಪಂ ವ್ಯಾಪ್ತಿಯ ಹೀರಾಮಣಿ ತಾಂಡದಲ್ಲಿ-8, ನಾಲವಾರ ಗ್ರಾ.ಪಂ ವ್ಯಾಪ್ತಿಯ ಸುಬ್ಬನಾಯಕ ತಾಂಡಾ-4, ಜಯರಾಂ ತಾಂಡಾ-9, ಭೋಜುನಾಯಕ ತಾಂಡಾ-4, ಸ್ಟೇಷನ್‌ ತಾಂಡಾ-2, ರಾವೂರ ಗ್ರಾ.ಪಂ ವ್ಯಾಪ್ತಿಯ

ಕೋಕುಲ ನಗರ-2, ಲಕ್ಷ್ಮೀಪುರವಾಡಿ-1, ಇಂಗಳಗಿ-1, ಬನ್ನೇಟಿ-1 ಹಾಗೂ ವಾಡಿ ನಗರದ ಪಿಲಕಮ್ಮಾ ದೇವಿ ಬಡಾವಣೆಯ ಓರ್ವ ಮಹಿಳೆಗೆ ಸೋಂಕು ಪ್ರಕರಣ ಸೇರಿದಂತೆ ಸಿಮೆಂಟ್‌ ನಗರಿ ಸುತ್ತಲೂ ಜೂ.8ರ ವರೆಗೆ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಒಟ್ಟು 111 ಕೋವಿಡ್‌ -19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಮೊದಲು ಒಬ್ಬರಲ್ಲಿ ಕೋವಿಡ್ ಸೋಂಕು ದೃಢಪಟ್ಟ ಮಾಹಿತಿ ಬಂದರೆ ಕ್ಷಣಾರ್ಧದಲ್ಲಿ ಪೊಲೀಸರು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ತಂಡ ಆ ಸ್ಥಳದಲ್ಲಿ ಬೀಡುಬಿಡುತ್ತಿತ್ತು. ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗುತ್ತಿತ್ತು. ಆದರೆ ಈಗ 111 ಪ್ರಕರಣಗಳು ದೃಢಪಟ್ಟು, ಸೋಂಕಿತರು ತಮ್ಮ ಊರುಗಳಲ್ಲಿ ಓಡಾಡಿ, ಈಗ ಆಸ್ಪತ್ರೆ ಸೇರಿದ್ದರೂ ಆರೋಗ್ಯ ಇಲಾಖೆಯಾಗಲಿ ಅಥವಾ ಪೊಲೀಸ್‌ ಇಲಾಖೆಯಾಗಲಿ ತಲೆ ಕೆಡಿಸಿಕೊಂಡಿಲ್ಲ. ಜನರ ಒತ್ತಡಕ್ಕೆ ಮಣಿದು ರಸ್ತೆಗೆ ಮುಳ್ಳುಕಂಟಿ ಬೇಲಿ ಹಾಕಿಸಿದ್ದು ಬಿಟ್ಟರೆ ಮತ್ತೆ ಯಾವುದೇ ಭದ್ರತೆ ಒದಗಿಸಲಾಗಿಲ್ಲ. ಅಲ್ಲದೇ ಸೋಂಕಿತರ ತಾಂಡಾಗಳಿಂದ ಜನರು ನಿತ್ಯ ವಾಡಿ ಮತ್ತು ನಾಲವಾರ ಮಾರುಕಟ್ಟೆಗೆ ಬಂದು ಹೋಗುತ್ತಿರುವುದರಿಂದ ರೋಗ ಹರಡುವ ಭೀತಿ ಹೆಚ್ಚಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next