Advertisement

INDvsNZ: ಪುಣೆಯಲ್ಲಿ ಸ್ಪಿನ್‌ ಬಲೆಗೆ ಬಿದ್ದ ಭಾರತ; 12 ವರ್ಷಗಳ ಬಳಿಕ ತವರಲ್ಲಿ ಸರಣಿ ಸೋಲು

03:55 PM Oct 26, 2024 | Team Udayavani |

ಪುಣೆ: ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ದ ತಾನೇ ತೋಡಿದ ಸ್ಪಿನ್‌ ಖೆಡ್ಡಾಗೆ ಬಿದ್ದ ಭಾರತ ತಂಡವು  (Team India) 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್‌ ಸರಣಿ ಸೋತಿದೆ. ಪುಣೆ ಟೆಸ್ಟ್‌ (Pune Test) ಪಂದ್ಯವನ್ನು 114 ರನ್‌ ಅಂತರದಿಂದ ಕಳೆದುಕೊಂಡ ರೋಹಿತ್‌ ಪಡೆಯು ಒಂದು ಪಂದ್ಯ ಬಾಕಿ ಉಳಿದಿರುವಂತೆ ಸರಣಿ ಸೋಲು ಕಂಡಿದೆ.

Advertisement

ಮೊದಲ ಇನ್ನಿಂಗ್ಸ್‌ ನಲ್ಲಿ 103 ರನ್‌ ಮುನ್ನಡೆಯೊಂದಿಗೆ ಬ್ಯಾಟಿಂಗ್‌ ಆರಂಭಿಸಿದ್ದ ನ್ಯೂಜಿಲ್ಯಾಂಡ್‌ ಎರಡನೇ ಇನ್ನಿಂಗ್ಸ್‌ ನಲ್ಲಿ 255 ರನ್‌ ಪೇರಿಸಿತು. ಈ ಮೂಲಕ ಭಾರತಕ್ಕೆ 359 ರನ್‌ ಗುರಿ ನೀಡಿತ್ತು. ಆದರೆ ಮತ್ತೊಮ್ಮೆ ಅಗ್ರ ಕ್ರಮಾಂಕದ ಬ್ಯಾಟರ್‌ ಗಳ ವೈಫಲ್ಯದ ಕಾರಣದಿಂದ ಭಾರತವು 245 ರನ್‌ ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ಇದರೊಂದಿಗೆ ಕಿವೀಸ್‌ 114 ರನ್‌ ಅಂತರದಿಂದ ಪಂದ್ಯ ಗೆದ್ದು ಮೊದಲ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್‌ ಸರಣಿ ಜಯಿಸಿತು.

ಮೊದಲ ಇನ್ನಿಂಗ್ಸ್‌ ನಲ್ಲಿ ಏಳು ವಿಕೆಟ್ ಗಳೊಂದಿಗೆ ಭಾರತವನ್ನು ಕಾಡಿದ್ದ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ಮತ್ತೊಮ್ಮೆ ಭಾರತಕ್ಕೆ ದುಸ್ವಪ್ನವಾದರು. ಮತ್ತೆ ಆರು ವಿಕೆಟ್‌ ಕಿತ್ತು ನ್ಯೂಜಿಲ್ಯಾಂಡ್‌ ಗೆಲುವಿನ ರೂವಾರಿಯಾದರು.

ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಮತ್ತು ಆಲ್‌ ರೌಂಡರ್‌ ರವೀಂದ್ರ ಜಡೇಜಾ ತಕ್ಕಮಟ್ಟಿಗೆ ತಂಡವನ್ನು ಆಧರಿಸಿದರು. ವೇಗವಾಗಿ ಬ್ಯಾಟಿಂಗ್‌ ನಡೆಸಿದ ಜೈಸ್ವಾಲ್‌ 65 ಎಸೆತಗಳಲ್ಲಿ 77 ರನ್‌ ಮಾಡಿದರೆ, ಕೊನೆಯಲ್ಲಿ ಜಡೇಜಾ 42 ರನ್‌ ಗಳಿಸಿದರು. ಉಳಿದಂತೆ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಸರ್ಫರಾಜ್‌ ಖಾನ್‌ ನಿರಾಸೆ ಮೂಡಿಸಿದರು.

Advertisement

ಸತತ 18 ಸರಣಿ ಜಯದ ಓಟ ಅಂತ್ಯ

ಭಾರತ ತವರಲ್ಲಿ ಕೊನೆಯ ಸಲ ಸರಣಿ ಕಳೆದುಕೊಂಡದ್ದು 2012-13ರಲ್ಲಿ, ಇಂಗ್ಲೆಂಡ್‌ ವಿರುದ್ಧ ಸೋತಿತ್ತು. ಅನಂತರ ತವರಿನಲ್ಲಿ ಸತತ 18 ಸರಣಿಗಳಲ್ಲಿ ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡು ಬಂದಿದೆ. ಈಗ ಆ ಅಜೇಯ ಓಟ ಅಂತ್ಯವಾಗಿದೆ.

ಕಿವೀಸ್‌ ಗೆ ಚೊಚ್ಚಲ ಟೆಸ್ಟ್‌ ಸರಣಿ ಜಯ

ನ್ಯೂಜಿಲ್ಯಾಂಡ್‌ 1955-56ರಲ್ಲಿ ಭಾರತದಲ್ಲಿ ಆಡಲಾರಂಭಿಸಿದ ಬಳಿಕ ಟೆಸ್ಟ್‌ ಸರಣಿ ಜಯಿಸಿದ್ದಿಲ್ಲ. ಇದೇ ಮೊದಲ ಬಾರಿಗೆ ಸರಣಿ ಜಯಿಸಿದೆ. ವಿಶೇಷವೆಂದರೆ ಇದುವರೆಗೆ ಕಿವೀಸ್‌ ಕೇವಲ 3 ಬಾರಿ ಭಾರತದಲ್ಲಿ ಟೆಸ್ಟ್‌ ಪಂದ್ಯಗಳನ್ನು ಗೆದ್ದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next