ರಾಜ್ ಕೋಟ್: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಕಿತ್ತ ಸಾಧನೆ ಮಾಡಿದರು. ರಾಜ್ ಕೋಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜ್ಯಾಕ್ ಕ್ರಾಲಿ ಅವರು ಅಶ್ವಿನ್ ಅವರ 500ನೇ ಬಲಿಯಾದರು.
ವಿಶಾಖಪಟ್ಟಣ ಪಂದ್ಯದ ಅಂತ್ಯಕ್ಕೆ ಅಶ್ವಿನ್ ಅವರ ಟೆಸ್ಟ್ ವಿಕೆಟ್ ಗಳ ಸಂಖ್ಯೆ 499 ಆಗಿತ್ತು. ರಾಜ್ ಕೋಟ್ ಪಂದ್ಯದ ಇಂಗ್ಲೆಂಡ್ ಇನ್ನಿಂಗ್ಸ್ ನ ಮೊದಲ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಅವರು 500 ವಿಕೆಟ್ ಗಳ ವಿಶೇಷ ಗುಂಪಿಗೆ ಸೇರಿದರು.
ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ವಿಶ್ವದ 9ನೇ ಆಟಗಾರನಾದರು. ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎಂಬ ಸಾಧನೆ ಮಾಡಿದರು. ಅನಿಲ್ ಕುಂಬ್ಳೆ ಅವರು 619 ವಿಕೆಟ್ ಕಿತ್ತು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಅತಿ ಕಡಿಮೆ ಎಸೆತಗಳಲ್ಲಿ 500 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. 25714 ಎಸೆತಗಳಲ್ಲಿ ಅಶ್ವಿನ್ ಐನೂರು ವಿಕೆಟ್ ಪಡೆದರೆ, ಮೊದಲ ಸ್ಥಾನದಲ್ಲಿರುವ ಗ್ಲೆನ್ ಮೆಕ್ ಗ್ರಾಥ್ ಅವರು 25528 ಎಸೆತಗಳಲ್ಲಿ 500 ವಿಕೆಟ್ ಪೂರೈಸಿದ್ದರು.
ಅತಿ ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿಯೂ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ 98ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರೆ, ಮುತ್ತಯ್ಯ ಮುರಳೀಧರನ್ ಅವರು 87 ಟೆಸ್ಟ್ ಪಂದ್ಯಗಳಲ್ಲಿ ಈ ದಾಖಲೆ ಬರೆದಿದ್ದರು.