ಮೆಲ್ಬೋರ್ನ್: ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಅಗ್ರಕ್ರಮಾಂಕದ ಬ್ಯಾಟರ್ ಗಳಲ್ಲಿ ಹಲವರ ವೈಫಲ್ಯದ ಕಾರಣದಿಂದ ಟೀಂ ಇಂಡಿಯಾ ಇನ್ನೂ ಹಿನ್ನಡೆಯಲ್ಲಿದೆ. ಈ ಮಧ್ಯೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ವಿರುದ್ದ ಮಾಜಿ ಆಟಗಾರ ಸುನೀಲ್ ಗಾವಸ್ಕರ್ ಅವರು ಕಿಡಿಕಾರಿದ್ದಾರೆ.
37 ಎಸೆತಗಳಲ್ಲಿ 28 ರನ್ ಮಾಡಿದ್ದ ವೇಳೆ ರಿಷಭ್ ಪಂತ್ ತಮ್ಮ ಎಂದಿನ ರ್ಯಾಂಪ್ ಶಾಟ್ ಹೊಡೆಯಲು ಹೋಗಿ ವಿಕೆಟ್ ಒಪ್ಪಿಸಿದರು. ಸ್ಕಾಟ್ ಬೊಲ್ಯಾಂಡ್ ಎಸೆತದಲ್ಲಿ ನಾಥನ್ ಲಿಯಾನ್ ಗೆ ಕ್ಯಾಚಿತ್ತು ಪಂತ್ ಮರಳಿದರು. ಇದರಿಂದ ಸುನೀಲ್ ಗಾವಸ್ಕರ್ ಕೆಂಡಾಮಂಡಲವಾದರು.
“ಇದು ಭಯಾನಕ ಶಾಟ್ ಆಯ್ಕೆ. ವಿಶೇಷವಾಗಿ ಫೀಲ್ಡರ್ ಗಳು ಆ ಜಾಗದಲ್ಲಿ ಇದ್ದಾಗ ಇಂತಹ ಹೊಡೆತದ ಆಯ್ಕೆ ಯಾಕೆ? ಅವರು ಚೆಂಡನ್ನು ಲಾಂಗ್ನಲ್ಲಿ ಹೊಡೆಯುವ ಮೂಲಕ ಅಥವಾ ಈ ಹೊಡೆತಗಳನ್ನು ಆಡಲು ನೋಡುವ ಮೂಲಕ ಸ್ಕೋರ್ ಮಾಡಲು ಎರಡು ಮಾರ್ಗಗಳನ್ನು ಹೊಂದಿರುವಂತೆ ತೋರುತ್ತಿದೆ. ಇದರರ್ಥ, ಟೆಸ್ಟ್ ಮಟ್ಟದಲ್ಲಿ ನೀವು ಯಾವಾಗಲೂ ರನ್ ಗಳಿಸಲು ಸಾಧ್ಯವಿಲ್ಲ. ಅವರು ಈ ರೀತಿ ಬ್ಯಾಟ್ ಮಾಡಲು ಬಯಸಿದರೆ, ಐದನೇ ಕ್ರಮಾಂಕ ಅಥವಾ ಕೆಳಗೆ ಬ್ಯಾಟ್ ಮಾಡಲು ಸಾಧ್ಯವಿಲ್ಲ” ಎಂದು ಸುನಿಲ್ ಗಾವಸ್ಕರ್ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಹೇಳಿದ್ದಾರೆ.
“ಅವನ ಕೆಲವು ಬೌಂಡರಿಗಳು ಎಡ್ಜ್ ಆಗಿ ಸ್ಲಿಪ್ಗಳ ಮೂಲಕ ಬಂದಿದೆ. ಅವರ 50 ಪ್ಲಸ್ ಪರಿವರ್ತನೆ ದರವು ಕೇವಲ 19 ಪ್ರತಿಶತವಾಗಿದೆ? ಇದು ಐದನೇ ಕ್ರಮಾಂಕಕ್ಕೆ ಸಾಕಾಗುತ್ತದೆಯೇ?” ಎಂದು ಗಾವಸ್ಕರ್ ಹೇಳಿದರು.