ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಯಲ್ಲಿ ಮೈಸೂರು ಸಂಸ್ಥಾನದ ಅರಸರ ಕೊಡುಗೆ ಅಪಾರ ಎಂದು ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಎಫ್ಕೆಸಿಸಿಐ ಶತಮಾನೋತ್ಸವ ದಿನಾಚರಣೆ ಯಲ್ಲಿ ಮಾತನಾಡಿದ ಅವರು, ರಾಜ್ಯದ ಕೈಗಾರಿಕೆ ಗಳ ಬೆಳವಣಿಗೆಗೆ ಅಗತ್ಯವಾದ ಯೋಜನೆಗಳನ್ನು ಈ ಹಿಂದೆಯೇ ಮೈಸೂರು ಸಂಸ್ಥಾನದ ಅರಸರು ರೂಪಿಸಿದ್ದರು. ಅವರ ಆಲೋಚನೆ ಇಂದಿನ ಕೈಗಾರಿಕಾ ಸಾಧನೆಗೆ ತಳಹದಿ. ಪ್ರಸ್ತುತ ಇಡೀ ದೇಶದಲ್ಲಿಯೇ ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ತಿಳಿಸಿದರು.
ಮೈಸೂರು ಸಂಸ್ಥಾನದ ಜನಪರವಾದ ಯೋಜನೆಗಳು ಇಂದು ಸಾಕಷ್ಟು ಫಲನೀಡಿವೆ. ನಾಲ್ವಡಿ ಚಾಮರಾಜ ಒಡೆಯರ್ ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ನಂತರದ ಎಲ್ಲ ಅರಸರು ನಡೆದರು. ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ ಸೇರಿದಂತೆ ಅನೇಕ ತಜ್ಞರು ಸೂಕ್ತ ಮಾರ್ಗದರ್ಶನ, ಸಲಹೆ ನೀಡಿದ್ದರು. ನಾನು ಕೂಡ ನಮ್ಮ ಪೂರ್ವಿಕರು ಜನಹಿತಕ್ಕೋಸ್ಕರ ನಡೆದ ಮಾರ್ಗದಲ್ಲಿಯೇ ನಡೆಯುತ್ತೇನೆ ಎಂದರು.
ರಾಜ್ಯದಲ್ಲಿರುವ ಕೈಗಾರಿಕೆಗಳು ಮತ್ತಷ್ಟು ಅಭಿವೃದ್ಧಿ ಕಾಣುವ ನಿಟ್ಟಿನಲ್ಲಿ ಎಫ್ಕೆಸಿಸಿಐ ಅಗತ್ಯ ಯೋಜನೆಗಳನ್ನು ರೂಪಿಸಬೇಕು. ಇದರೊಂದಿಗೆ ರಾಜ್ಯ ಸರ್ಕಾರ ರೂಪಿಸುವ ಕೈಗಾರಿಕಾ ನಿಯಮಗಳ ಬಗ್ಗೆ, ಸಂಸ್ಥೆಯಿಂದ ಅಗತ್ಯ ಸಲಹೆ ಪಡೆಯಬೇಕು. ಇದು ರಾಜ್ಯದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.
ಎಫ್ಕೆಸಿಸಿಐ ಅಧ್ಯಕ್ಷ ಎಂ.ಸಿ ದಿನೇಶ್ ಮಾತನಾಡಿ, ಈ ಬಾರಿಯ ಬಜೆಟ್‌ನಲ್ಲಿ ಕೈಗಾರಿಕೋದ್ಯಮಿಗಳಿಗೆ ಸಹಾಯ ವಾಗುವ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಅನೇಕ ಯೋಜನೆಗಳು ಸಹಕಾರಿಯಾಗಲಿದೆ. ಮುಖ್ಯಮಂತ್ರಿಗಳು ಮಹಿಳಾ ಕೈಗಾರಿಕೋದ್ಯಮಿಗಳಿಗೆ ಸಹಾಯವಾಗುವ ಯೋಜನೆಗಳನ್ನು ರೂಪಿಸಿದ್ದು, ಇದರಿಂದ ಅನೇಕ ಮಹಿಳೆಯರು ಕೈಗಾರಿಕಾ ಕ್ಷೇತ್ರಕ್ಕೆ ಬರಲು ಸಹಾಯಕವಾಗಲಿದೆ ಎಂದರು.