ಬೆಂಗಳೂರು: ಇತ್ತೀಚೆಗೆ ಮುಗಿದ ನ್ಯೂಜಿಲ್ಯಾಂಡ್ ವಿರುದ್ದದ ಟೆಸ್ಟ್ ಸರಣಿಗೆ ಮೊದಲು ಕಿವೀಸ್ ಆಟಗಾರನಿಗೆ ಅಭ್ಯಾಸ ನಡೆಸಲು ನೆರವು ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿರುದ್ದ ಮಾಜಿ ಆಟಗಾರ ರಾಬಿನ್ ಉತ್ತಪ್ಪ (Robin Uttappa) ಕಿಡಿಕಾರಿದ್ದಾರೆ. ದೇಶದ ಹಿತಾಸಕ್ತಿ ಅಪಾಯದಲ್ಲಿದ್ದಾಗ, ತಂಡಗಳು ಎಚ್ಚರಿಕೆ ವಹಿಸಬೇಕು ಎಂದು ರಾಬಿನ್ ಉತ್ತಪ್ಪ ಹೇಳಿದರು.
ಟೆಸ್ಟ್ ಸರಣಿಗೆ ಮೊದಲು ಕಿವೀಸ್ ಮತ್ತು ಸಿಎಸ್ ಕೆ ಆಟಗಾರ ರಚಿನ್ ರವೀಂದ್ರ ಅವರಿಗೆ ಅಭ್ಯಾಸ ನಡೆಸಲು ತನ್ನ ಅಕಾಡಮಿಯಲ್ಲಿ ಅನುವು ನೀಡಿತ್ತು. ರಚಿನ್ ರವೀಂದ್ರ ಅವರು ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮೂಡಿ ಬಂದಿದ್ದರು. ಟೆಸ್ಟ್ ಸರಣಿಯನ್ನು ನ್ಯೂಜಿಲ್ಯಾಂಡ್ ತಂಡುವ 3-0 ಅಂತರದಿಂದ ಗೆದ್ದು ವೈಟ್ ವಾಶ್ ಮಾಡಿಕೊಂಡಿತ್ತು.
“ರಚಿನ್ ರವೀಂದ್ರ ಇಲ್ಲಿಗೆ ಬಂದು ಸಿಎಸ್‌ಕೆ ಅಕಾಡೆಮಿಯಲ್ಲಿ ಅಭ್ಯಾಸ ಮಾಡಿದರು. ಸಿಎಸ್‌ಕೆ ಯಾವಾಗಲೂ ತನ್ನ ಫ್ರಾಂಚೈಸ್ ಆಟಗಾರರನ್ನು ನೋಡಿಕೊಳ್ಳುವ ಸುಂದರವಾದ ಫ್ರಾಂಚೈಸ್ ಆಗಿದೆ ಆದರೆ ದೇಶದ ಹಿತಾಸಕ್ತಿಯು ನಿಮ್ಮ ಫ್ರಾಂಚೈಸ್ ಆಟಗಾರರಿಗಿಂತ ಮುಂದೆ ಬರುತ್ತದೆ ಎಂಬ ಸೂಕ್ಷ್ಮತೆ ಇರಬೇಕು. ವಿಶೇಷವಾಗಿ ವಿದೇಶಿ ಆಟಗಾರನೊಬ್ಬ ಬಂದು ನಮ್ಮ ದೇಶದ ವಿರುದ್ಧ ಆಡುವಾಗ”ಎಂದು ಉತ್ತಪ್ಪ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
“ಸಿಎಸ್‌ಕೆ ಯಾವಾಗಲೂ ತಮ್ಮ ಆಟಗಾರರನ್ನು ನೋಡಿಕೊಳ್ಳುವುದರಲ್ಲಿ ಮುಂದಿರುತ್ತದೆ. ನಾನು ಸಿಎಸ್ ಕೆ ಯನ್ನು ಸಂಪೂರ್ಣವಾಗಿ ಪ್ರೀತಿಸುತ್ತೇನೆ, ಆದರೆ ದೇಶದ ವಿಚಾರಕ್ಕೆ ಬಂದಾಗ, ನಾವು ಗೆರೆ ದಾಟಬಾರದು” ಎಂದು ಅವರು ಹೇಳಿದರು.