Advertisement

ಕೈಗಾರಿಕಾ ವಿಕೇಂದ್ರೀಕರಣ ಪ್ರತಿಪಾದನೆ

10:04 AM Mar 27, 2022 | Team Udayavani |

ಹುಬ್ಬಳ್ಳಿ: ರಾಜ್ಯದ ತಲಾವಾರು ಆದಾಯ ಹೆಚ್ಚಿರುವ ಮೊದಲ 10 ಜಿಲ್ಲೆಗಳಲ್ಲಿ ಉತ್ತರ ಕರ್ನಾಟಕದ ಒಂದೂ ಜಿಲ್ಲೆ ಸ್ಥಾನ ಪಡೆಯದಿರುವುದು ನೋವು ತರಿಸುತ್ತಿದೆ. ಸಮಾಧಾನದ ಸಂಗತಿ ಎಂದರೆ 11ನೇ ಸ್ಥಾನದಲ್ಲಿ ಧಾರವಾಡ ಜಿಲ್ಲೆ ಇದೆ. ಬೆಂಗಳೂರು ಹೊರತಾದ ಪ್ರದೇಶದಲ್ಲಿ ಉದ್ಯಮ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಟೈಕಾನ್‌ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಜಿಲ್ಲೆಗಳಿಗೆ ಹೋಲಿಸಿದರೆ ತಲಾದಾಯದಲ್ಲಿ ಉತ್ತರದ ಜಿಲ್ಲೆಗಳು ಹಿಂದಿವೆ. ಬೆಂಗಳೂರು ಸೇರಿ ಆ ಭಾಗದ ಕೆಲ ಜಿಲ್ಲೆಗಳ ಸರಾಸರಿ ತಲಾದಾಯ 5 ಲಕ್ಷ ರೂ. ಇದ್ದರೆ, 11ನೇ ಸ್ಥಾನ ಪಡೆದಿರುವ ಧಾರವಾಡದ ಸರಾಸರಿ ತಲಾ ಆದಾಯ 1.77 ಲಕ್ಷ ರೂ. ಆಗಿದೆ ಎಂದರು.

ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇರುವಂತೆ ನಮ್ಮ ರಾಜ್ಯದಲ್ಲಿಯೂ ಕೈಗಾರಿಕಾ ವಿಕೇಂದ್ರೀಕರಣ ಆಗಬೇಕಾಗಿದೆ. ಆದರೆ, ಪ್ರಸ್ತುತ ಬೆಂಗಳೂರು ಕೇಂದ್ರೀಕೃತ ಉದ್ಯಮ ಬೆಳವಣಿಗೆ ಆಗಿದೆ. ಅದು ಬದಲಾಗಬೇಕಾಗಿದೆ. ನಾನು ಕೈಗಾರಿಕಾ ಸಚಿವನಾಗಿದ್ದಾಗ ಕೈಗೊಂಡ ಕೈಗಾರಿಕಾ ನೀತಿ ಹಾಗೂ ಉತ್ತೇಜನ ಕ್ರಮದಿಂದ ಅನೇಕ ಉದ್ಯಮಗಳು ಉತ್ತರಮುಖೀಯಾಗಿವೆ. ದೇಶಪಾಂಡೆ ಫೌಂಡೇಶನ್‌, ಟೈನಿಂದಾಗಿ ನವೋದ್ಯಮ ಬೆಳವಣಿಗೆ ಆಗಿದೆ. ಏಕಸ್‌, ಯುಫ್ಲೆಕ್ಸ್‌, ರಾಜೇಶ ಎಕ್ಸ್‌ಪೋರ್ಟ್‌ ಸೇರಿದಂತೆ ಅನೇಕ ದೊಡ್ಡ ಉದ್ಯಮಗಳು ಹುಬ್ಬಳ್ಳಿ-ಧಾರವಾಡ, ಕೊಪ್ಪಳಗಳಿಗೆ ಬರುತ್ತಿವೆ. ಎಫ್‌ಎಂಸಿಜಿ ಗೇಮ್‌ ಚೇಂಜರ್‌ ಆಗಲಿದೆ ಎಂದರು.

ಹು-ಧಾದಲ್ಲಿ ಉದ್ಯಮಗಳಿಗೆ ನಿವೇಶನಗಳನ್ನು ನೀಡಲು ಜಾಗ ಇಲ್ಲವಾಗಿದ್ದು, ಭೂ ಸ್ವಾಧೀನಕ್ಕೆ ಒತ್ತು ನೀಡಬೇಕು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ, ಬೇಲೇಕೇರಿ ಬಂದರು ಅಭಿವೃದ್ಧಿ ಇನ್ನಿತರ ಕಾರ್ಯಗಳು ಆಗಬೇಕಾಗಿದೆ ಎಂದರು.

ಉದ್ಯಮಕ್ಕೆ ಮುಂದಾಗಿ: ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಯುವಕರು ಉದ್ಯಮಕ್ಕೆ ಮುಂದಾಗುವ ಮೂಲಕ ಇತರರಿಗೆ ಉದ್ಯೋಗ ನೀಡುವ ಕಾರ್ಯಕ್ಕೆ ಮುಂದಾಗಬೇಕು. ಸುಮಾರು 30-40 ವರ್ಷಗಳ ಹಿಂದೆ ಯುವಕರು ತಮ್ಮ ವೆಚ್ಚದ ಹಣಕ್ಕಾಗಿ ತಂದೆ-ತಾಯಿಗಳನ್ನು ಅವಲಂಬಿಸಿದ್ದರು. ಆದರೆ, ಇದೀಗ ಸ್ವಯಂ ಆದಾಯ ಸೃಷ್ಟಿಗೆ ಮುಂದಾಗಿರುವುದು ಸಂತಸದ ವಿಚಾರವಾಗಿದೆ. ಆದರೂ ನಿರುದ್ಯೋಗ ಹೆಚ್ಚುತ್ತಿದೆ. ಬಿಎಡ್‌ ಪದವಿ ಮುಗಿಸಿದ ಸುಮಾರು 38 ಸಾವಿರ ಪದವೀಧರರು, ಡಿಎಡ್‌ ಮುಗಿಸಿದ 98 ಸಾವಿರ ಜನರಿಗೆ ಉದ್ಯೋಗ ಇಲ್ಲವಾಗಿದೆ. ಇದೀಗ ಸರಕಾರ 15 ಸಾವಿರ ಶಿಕ್ಷಕರ ನೇಮಕ್ಕೆ ಮುಂದಾಗಿದೆ ಎಂದು ಹೇಳಿದರು.

Advertisement

ಗ್ಲೋಬಲ್‌ ಟೈ ಅಧ್ಯಕ್ಷ ಬಿ.ಜೆ. ಅರುಣ ಮಾತನಾಡಿ, ಗ್ಲೋಬಲ್‌ ಟೈ 30ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಉದ್ಯೋಗ ಮತ್ತು ಸಂಪತ್ತು ಸೃಷ್ಟಿ ಮುಖ್ಯ ಧ್ಯೇಯವಾಗಿದೆ. ಉದ್ಯಮ ಮೌಲ್ಯವರ್ಧನೆ ಬಿಟ್ಟರೆ ಬೇರಾವ ಅಜೆಂಡಾಕ್ಕೆ ಒತ್ತು ನೀಡುತ್ತಿಲ್ಲ ಎಂದರು.

ಉದ್ಯಮಿ ವಿಎಸ್‌ವಿ ಪ್ರಸಾದ ಮಾತನಾಡಿ, ಉದ್ಯಮ ಬೆಳವಣಿಗೆಗೆ ಟೈ ಅತ್ಯುತ್ತಮ ವೇದಿಕೆಯಾಗಿದ್ದು, ನವೋದ್ಯಮಿಗಳು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಟೈ ಹುಬ್ಬಳ್ಳಿ ಅಧ್ಯಕ್ಷ ವಿಜೇಶ ಸೈಗಲ್‌ ಪ್ರಾಸ್ತಾವಿಕ ಮಾತನಾಡಿ, ನವೋದ್ಯಮ ಉದ್ಯಮ ಚಿಂತನೆ ಸ್ಪರ್ಧೆಯಲ್ಲಿ ಸುಮಾರು 60 ನವೋದ್ಯಮಿಗಳು ಭಾಗಿಯಾಗಿದ್ದರು. ಅದರಲ್ಲಿ 18 ಜನರು ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದು, ಇದರಲ್ಲಿ ಐವರಿಗೆ ತಲಾ 50 ಸಾವಿರ ರೂ. ನೀಡಲಾಗುವುದು ಎಂದರು. ತರುಣ ಮಹಾಜನ, ಪಲ್ಲವಿ ಮಲಾನಿ ಮಾತನಾಡಿದರು. ಸಂಜನಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next