ಕಲಬುರಗಿ: ಇಲ್ಲಿನ ಜೇವರ್ಗಿ ಕ್ರಾಸ್ (ರಾಷ್ಟ್ರಪತಿ ವೃತ್ತ)ದಲ್ಲಿದ್ದ ನಾಲ್ಕುವರೆ ದಶಕಗಳ ಕಾಲದ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಹಾಗೂ ಸಹಾಯಕ ಕಚೇರಿ ಜತೆಗೆ ಕೈಮಗ್ಗ ಕಚೇರಿಯುಳ್ಳ ಕಟ್ಟಡ ಸಮುಚ್ಚಯ ಮಂಗಳವಾರ ರಾತ್ರಿ ವೇಳೆ ಕುಸಿತವಾಗಿದೆ.
ಕಟ್ಟಡ ಶಿಥಿಲಾವಸ್ಥೆಗೊಂಡಿರುವುದು ಎಲ್ಲರ ಗಮನಕ್ಕಿತ್ತು. ಕಟ್ಟಡ ಯಾವುದೇ ಸಂದರ್ಭದಲ್ಲಿ ಬೀಳಬಹುದು ಎಂದು ಗೊತ್ತಿದ್ದರೂ ಮಂಗಳವಾರ ಸಂಜೆ 7ಗಂಟೆ ವರೆಗೂ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು. ಕಚೇರಿಯಲ್ಲಿದ್ದ ಕಂಪ್ಯೂಟರ್ ಸೇರಿದಂತೆ ಇತರ ಪೀಠೊಪಕರಣಗಳು, ಕಡತಗಳು ಅವಶೇಷಗಳಡಿ ಸಿಲುಕಿಕೊಂಡಿವೆ.
ಕಟ್ಟಡ ರಾತ್ರಿ ಸಮಯದಲ್ಲಿ ಕುಸಿತವಾಗಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಜಂಟಿ ಕೃಷಿ ನಿರ್ದೇಶಕರು, ಸಹಾಯಕ ನಿರ್ದೇಶಕರು ಸೇರಿದಂತೆ ನಿತ್ಯ ಹತ್ತಾರು ನೌಕರರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಕಟ್ಟಡದ ಆವರಣದೊಳಗೆ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಆ್ಯಡ್ ಏಜೆನ್ಸಿ (ಎಂಸಿಎ) ಕಟ್ಟಡವಿದೆ. ಆದರೆ ಈ ಕಟ್ಟಡಕ್ಕೆ ಯಾವುದೇ
ಹಾನಿಯಾಗಿಲ್ಲ.
ಜಿಲ್ಲಾಧಿಕಾರಿ ಗಮನಕ್ಕೆ: ಜಂಟಿ ಕೈಗಾರಿಕಾ ನಿರ್ದೇಶಕರ ಕಚೇರಿ ಕುಸಿದು ಬಿದ್ದಿರುವ ವಿಷಯವನ್ನು ಜಂಟಿ ನಿರ್ದೇಶಕ ಮಾಣಿಕ ರಘೋಜಿ ಅವರು ಇಲಾಖಾ ಮೇಲಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ. ಈಗಾಗಲೇ ಕಟ್ಟಡ ನೆಲಸಮವಾದ ಸಂಬಂಧ ಮೇಲಾಧಿಕಾರಿಗಳಿಗೆ ತಿಂಗಳ ಹಿಂದೆಯೇ ಪತ್ರ ಬರೆಯಲಾಗಿದೆ. ಆದರೆ ಇನ್ನು ಅನುಮತಿ ಬಂದಿಲ್ಲ. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೊಸ ಕಟ್ಟಡ ನಿರ್ಮಾಣದ ನೀಲನಕ್ಷೆ ರೂಪಿಸುತ್ತಿದ್ದಾರೆ. ಅದರ ಆಧಾರದ ಮೇಲೆ ಕಟ್ಟಡ ನಿರ್ಮಾಣವಾಗಲಿದೆ ಎಂದು ಜಂಟಿ ನಿರ್ದೇಶಕರು ವಿವರಣೆ ನೀಡಿದ್ದಾರೆ.
ವರದಿಗೆ ಸೂಚನೆ: ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಕಟ್ಟಡ ಕುಸಿದಿದ್ದನ್ನು ವೀಕ್ಷಿಸಿ, ಕಟ್ಟಡ ಬೀಳುತ್ತದೆ ಎಂಬುದನ್ನು ಗೊತ್ತಿದ್ದರೂ ತಾತ್ಕಾಲಿಕ ದುರಸ್ತಿಗೆ ಇಲ್ಲವೇ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಏಕೆ ಮುಂದಾಗಲಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೇ, ಘಟನೆ ವರದಿ ನೀಡುವಂತೆ ತಾಕೀತು ಮಾಡಿದರು.
ಕಟ್ಟಡ ನಿರ್ಮಾಣ ಸಂಬಂಧ ಜಿಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದಲ್ಲದೇ ಹೊಸ ಕಟ್ಟಡ ನಿರ್ಮಾಣಕ್ಕೆ ಕೈ ಜೋಡಿಸಲು ಮುಂದಾಗಲಾಗುವುದು ಎಂದು ರದ್ದೇವಾಡಗಿ ತಿಳಿಸಿದರು. ಸ್ಥಾಯಿ ಸಮಿತಿ ಸದಸ್ಯರಾದ ಗುರುಶಾಂತಗೌಡ ಪಾಟೀಲ ನಿಂಬಾಳ, ಅಶೋಕ ಸಗರ ಹಾಜರಿದ್ದರು.