ಜಕಾರ್ತಾ: ಭಾರತದ ಸ್ಟಾರ್ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಎಚ್.ಎಸ್. ಪ್ರಣಯ್ “ಇಂಡೋನೇಷ್ಯಾ ಓಪನ್ ವರ್ಲ್ಡ್ ಟೂರ್ ಸೂಪರ್-1000′ ಬ್ಯಾಡ್ಮಿಂಟನ್ ಕೂಟದ ಮೊದಲ ಸುತ್ತು ದಾಟಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರದ ಮುಖಾಮುಖಿಯಲ್ಲಿ ಪಿ.ವಿ. ಸಿಂಧು ತವರಿನ ನೆಚ್ಚಿನ ಆಟಗಾರ್ತಿ ಗ್ರೇಗೊರಿಯಾ ಮರಿಸ್ಕಾ ಟುಂಜುಂಗ್ ಅವರನ್ನು 38 ನಿಮಿಷಗಳಲ್ಲಿ 21-19, 21-15 ಅಂತರದಿಂದ ಕೆಡವಿದರು. ಇದು ಟುಂಜುಂಗ್ ವಿರುದ್ಧ ಆಡಿದ ಕಳೆದ 3 ಪಂದ್ಯಗಳಲ್ಲಿ ಸಿಂಧು ಸಾಧಿಸಿದ ಮೊದಲ ಗೆಲುವು. ಇದರಲ್ಲಿ 2 ಸೋಲು ಈ ವರ್ಷವೇ ಮ್ಯಾಡ್ರಿಡ್ ಮಾಸ್ಟರ್ ಫೈನಲ್ ಮತ್ತು ಮಲೇಷ್ಯಾ ಮಾಸ್ಟರ್ ಸೆಮಿಫೈನಲ್‌ನಲ್ಲಿ ಎದುರಾಗಿತ್ತು.
ಕಳೆದೆರಡು ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದ ಸಿಂಧು, ವಿಶ್ವ ರ್‍ಯಾಂಕಿಂಗ್‌ನಲ್ಲಿ 13ನೇ ಸ್ಥಾನಕ್ಕೆ ಇಳಿದಿದ್ದರು. ಮುಂದಿನ ಸುತ್ತಿನಲ್ಲಿ ಸಿಂಧು ಎದುರಾಳಿ ಥೈವಾನ್‌ನ ತೈ ಜು ಯಿಂಗ್. ಇವರೆದುರಿನ ಕಳೆದ 8 ಪಂದ್ಯಗಳಲ್ಲಿ ಸಿಂಧು ಸೋಲನುಭವಿಸಿದ್ದರು. ಒಟ್ಟು ಮುಖಾಮುಖಿಯಲ್ಲಿ ಸಿಂಧು 5-18ರ ಹಿನ್ನಡೆಯಲ್ಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್. ಪ್ರಣಯ್ 21-16, 21-14 ಅಂತರದಿಂದ ಜಪಾನ್‌ನ ಕೆಂಟ ನಿಶಿಮೊಟೊ ವಿರುದ್ಧ ಜಯ ಸಾಧಿಸಿದರು. ಪ್ರಣಯ್ ಇನ್ನು ಹಾಂಕಾಂಗ್‌ನ ಎನ್‌ಜಿ ಲಾಂಗ್ ಆ್ಯಂಗಸ್ ವಿರುದ್ಧ ಆಡಲಿದ್ದಾರೆ.
ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಮೊದಲ ಸುತ್ತಿನಲ್ಲೇ ಎಡವಿದರು.