Advertisement

ಚೀನ ಎಂಬ ವೈರಸ್‌ಗೆ ಸಿದ್ಧಪಡಿಸುವರು ಯಾರು ಲಸಿಕೆ?

03:10 PM Jun 18, 2020 | Hari Prasad |

ಭಾರತ-ಚೀನ ನಡುವೆ ಗಡಿ ಭಾಗದಲ್ಲಿ ಯುದ್ಧಸದೃಶ ವಾತಾ­ವರಣ ನಿರ್ಮಾಣವಾಗಿರುವುದಂತೂ ಸತ್ಯ.

Advertisement

ಗಡಿ ಭಾಗದಲ್ಲಿನ ಭಾರತದ ಮೂಲಸೌಕರ್ಯಾಭಿವೃದ್ಧಿ ಕಾರ್ಯಗಳು, ಅದರಲ್ಲೂ ರಸ್ತೆ ನಿರ್ಮಾಣ ಯೋಜನೆಗಳು ಚೀನದ ಕಣ್ಣು ಕೆಂಪಾಗಿರುವುದಕ್ಕೆ ಪ್ರಮುಖ ಕಾರಣ.

ಗಮನಿಸಬೇಕಾದ ಅಂಶವೆಂದರೆ, ಭಾರತದೊಂದಿಗೆ ಗಡಿ ತಂಟೆಯನ್ನು ತಾನಾಗಿಯೇ ಮಾಡುತ್ತಾ, ನಮ್ಮ ಮೇಲೆಯೇ ಅದು ಆರೋಪ ಹೊರಿಸುತ್ತಿರುವುದು.

ಭಾರತದ ಜತೆಗಷ್ಟೇ ಅಲ್ಲ, ಕೋವಿಡ್‌-19 ಹಾವಳಿ ಆರಂಭವಾದಾಗಿನಿಂದ ತನ್ನ ಬಹುತೇಕ ನೆರೆ ರಾಷ್ಟ್ರಗಳಿಗೂ ಚೀನದ ಉಪಟಳ ಅಧಿಕವಾಗಿಬಿಟ್ಟಿದೆ…

ಭಾರತಕ್ಕಷ್ಟೇ ಅಲ್ಲ ಚೀನ ಕಿರಿಕಿರಿ
ಚೀನದೊಂದಿಗೆ ಒಟ್ಟು 14 ರಾಷ್ಟ್ರಗಳು ಗಡಿಯನ್ನು ಹಂಚಿಕೊಂಡಿವೆ. ಪಾಕ್‌, ರಷ್ಯಾ, ಮ್ಯಾನ್ಮಾರ್‌ ಸೇರಿದಂತೆ 6 ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದ ರಾಷ್ಟ್ರಗಳೊಂದಿಗೆ ಚೀನ ನಿತ್ಯ ಗಡಿ ಬಿಕ್ಕಟ್ಟನ್ನು ಸೃಷ್ಟಿಸುತ್ತಲೇ ಇರುತ್ತದೆ. ಭೂ ಪ್ರದೇಶದ ವಿಚಾರವೆಂದಷ್ಟೇ ಅಲ್ಲ, ತೈವಾನ್‌, ಜಪಾನ್‌, ಫಿಲಿಪ್ಪೀನ್ಸ್‌ ಹಾಗೂ ವಿಯೆಟ್ನಾಂನೊಂದಿಗೆ ಜಲ ಗಡಿಯ ವಿಚಾರದಲ್ಲೂ ತೊಂದರೆ ಮಾಡುತ್ತಲೇ ಇರುತ್ತದೆ.

Advertisement

ಈಗ ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಎಲ್ಲ ರಾಷ್ಟ್ರಗಳೂ ವ್ಯಸ್ತವಾಗುತ್ತಿರುವಂತೆಯೇ ಚೀನದ ಉಪಟಳ ಮತ್ತಷ್ಟು ಹೆಚ್ಚಾಗಿದೆ. ಇತ್ತೀಚೆಗಷ್ಟೇ, ತೈವಾನ್‌ಗೆ (ಇದನ್ನು ತನ್ನ ಪ್ರಾಂತ್ಯವೆಂದೇ ಚೀನ ವಾದಿಸುತ್ತದೆ) ಯುದ್ಧದ ಬೆದರಿಕೆಯನ್ನು ಒಡ್ಡಿರುವ ಚೀನ, ಕಳೆದ ತಿಂಗಳು ಜಪಾನ್‌ನ ಜಲ ಗಡಿಯ ಬಳಿ ತನ್ನ ಯುದ್ಧವಿಮಾನಗಳನ್ನು ಹಾರಿಸಿ ಗದ್ದಲ ಮಾಡಿತ್ತು.

ಕಳೆದ ವಾರ, ವಿಯೆಟ್ನಾಂನ ಮೀನುಗಾರರ ಎರಡು ಹಡಗುಗಳನ್ನು ನಾಶ ಮಾಡಿ ಆ ಪುಟ್ಟ ದೇಶವನ್ನು ಕಾಡಿತ್ತು. ಇನ್ನು ಹಾಂಗ್‌ಕಾಂಗ್‌ನಲ್ಲಂತೂ ಚೀನದ ದರ್ಪ ಮಿತಿಮೀರುತ್ತಿದೆ. ಈಗ ಹಾಂಗ್‌ಕಾಂಗ್‌ ಜನರನ್ನು ಹತ್ತಿಕ್ಕುವ ಸಲುವಾಗಿಯೇ ಜಿನ್‌ಪಿಂಗ್‌ ಸರಕಾರ ರಾಷ್ಟ್ರದ್ರೋಹದ ಕಾನೂನನ್ನು ಮತ್ತಷ್ಟು ತೀಕ್ಷ್ಣಗೊಳಿಸಿದೆ.

ಚೀನದ ಮಾತು ಕೃತಿಗೆ ತಾಳೆಯೇ ಇಲ್ಲ
1954ರಲ್ಲಿ ಎರಡೂ ದೇಶಗಳ ನಡುವೆ ಆದ ಪಂಚಶೀಲತತ್ವಕ್ಕೆ ಭಾರತ ಬದ್ಧವಾಗಿದ್ದರೂ ಚೀನ ಮಾತ್ರ ಆರಂಭದಿಂದಲೇ ಒಪ್ಪಂದದ ಅಂಶಗಳನ್ನೆಲ್ಲ ಉಲ್ಲಂಘಿಸುತ್ತಲೇ ಬಂದಿತು. ಒಪ್ಪಂದ ನಡೆದ ಮರು ತಿಂಗಳಲ್ಲೇ ಚೀನ, ತನ್ನ ದೇಶದ ನಕ್ಷೆಯನ್ನು ಬಿಡುಗಡೆ ಮಾಡಿದ್ದಷ್ಟೇ ಅಲ್ಲದೇ ಅದರಲ್ಲಿ ಭಾರತದ ಭೂಭಾಗಗಳನ್ನೂ ತನ್ನದೆಂಬಂತೆ ತೋರಿಸಿತು. ನ್ಯೂಟ್ರಲ್‌ ವಲಯಗಳಲ್ಲಿ ನಿಧಾನಕ್ಕೆ ಭಾರತಕ್ಕೆ ತಿಳಿಯದಂತೆ ಜಾಗ ಆಕ್ರಮಿಸಿಕೊಳ್ಳಲಾರಂಭಿಸಿತು.

1959ರಲ್ಲಿ ಚೀನ ವಿರುದ್ಧ ಟಿಬೆಟ್‌ನಲ್ಲಿ ನಡೆದ ಹೋರಾಟಕ್ಕೂ ಭಾರತವನ್ನು ಕಟಕಟೆಯಲ್ಲಿ ನಿಲ್ಲಿಸಲು ಪ್ರಯತ್ನಿಸಿತು ಚೀನ. ಅಲ್ಲದೇ, ಬೌದ್ಧ ಧರ್ಮಗುರು ದಲಾಯ್‌ ಲಾಮಾಗೆ ಆಶ್ರಯ ಕೊಟ್ಟಿದ್ದಕ್ಕಾಗಿ, ಭಾರತದ ವಿರುದ್ಧ ಹಗೆತನ ಹೆಚ್ಚಿಸಿಕೊಂಡಿತು. 1962ರಲ್ಲಿ ಭಾರತದ ಮೇಲೆ ಯುದ್ಧ ಸಾರಿಬಿಟ್ಟಿತು. ಹಠಾತ್ತನೆ ಚೀನ ಎಸಗಿದ ಈ ವಿಶ್ವಾಸಘಾತವು ನೆಹರೂ ಆಡಳಿತಕ್ಕೆ ಈಗಲೂ ಕಪ್ಪುಚುಕ್ಕೆಯಾಗಿ ಉಳಿದಿದೆ.

1962ರಿಂದ ಭಾರತ-ಚೀನ ನಡುವೆ ಯುದ್ಧಗಳಾಗಿಲ್ಲವಾದರೂ, ಯುದ್ಧ ರೀತಿಯ ಸಂದರ್ಭಗಳು ಅನೇಕ ಬಾರಿ ಸೃಷ್ಟಿಯಾಗಿವೆ. ವಿಡಂಬನೆಯೆಂದರೆ, ಪ್ರತಿ ಬಾರಿಯೂ ಚೀನದ ಆಕ್ರಮಣಶೀಲತೆಗೆ ಭಾರತ ಪ್ರತ್ಯುತ್ತರ ನೀಡಿದಾಗಲೆಲ್ಲ, “ಭಾರತ ಪಂಚಶೀಲತತ್ವಗಳಿಗೆ ಬದ್ಧವಾಗಿಲ್ಲ, ಉಲ್ಲಂ ಸುತ್ತಿದೆ’ ಎಂದು ಚೀನ ಆರೋಪಿಸುತ್ತದೆ. ಡೋಕ್ಲಾಂ ಬಿಕ್ಕಟ್ಟು ಸೃಷ್ಟಿಯಾದಾಗಲೂ ಚೀನ ಹೀಗೆಯೇ ಹೇಳಿತ್ತು!

ಪಂಚಶೀಲತತ್ವ ಹೆಸರಿಗೆ ಮಾತ್ರ!
1954ರಲ್ಲಿ ಭಾರತ ಹಾಗೂ ಚೀನ ನಡುವಿನ ಪರಸ್ಪರ ಶಾಂತಿ-ಸಂಬಂಧ ವೃದ್ಧಿಗಾಗಿ ಐದು ಅಂಶಗಳ ಒಪ್ಪಂದವೊಂದಕ್ಕೆ ನೆಹರೂ ಸರಕಾರ ಸಹಿ ಹಾಕಿತು. ಅವುಗಳೇ ಪಂಚಶೀಲತತ್ವಗಳು. ಗಮನಾರ್ಹ ಸಂಗತಿಯೆಂದರೆ, ಆ ಅವಧಿಯಲ್ಲೇ ನೆಹರೂ ಅವರು ಹಿಂದಿ-ಚೀನೀ ಭಾಯ್‌ ಭಾಯ್‌ ಎಂಬ ಘೋಷವಾಕ್ಯವನ್ನು ಹೊರಡಿಸಿದ್ದರು.

1) ಪರಸ್ಪರ ರಾಷ್ಟ್ರಗಳ ಪ್ರಾದೇಶಿಕ ಸ್ವಾಯತ್ತತೆ ಹಾಗೂ ಸಾರ್ವಭೌಮತೆಯನ್ನು ಗೌರವಿಸುವುದು.

2) ಪರಸ್ಪರ ಆಕ್ರಮಣ ಮಾಡದಿರುವುದು

3) ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು

4) ಸಹಕಾರ ಮತ್ತು ಸಮಾನತೆ

5) ಶಾಂತಿಯುತ ಸಹಬಾಳ್ವೆ. ಈ 5 ಅಂಶಗಳಾಗಿವೆ.

ಮೆಕ್‌ಮೋಹನ್‌ ರೇಖೆಯನ್ನೂ ಒಪ್ಪದು
ಚೀನದೊಂದಿಗಿನ ಭಾರತದ ಗಡಿ ವಿವಾದದ ಮೂಲವಿರುವುದು ಬ್ರಿಟಿಷ್‌ ವಸಾಹತುಶಾಹಿಗಳ ಆಡಳಿತದಲ್ಲಿ. 1914ರಲ್ಲಿ ಬ್ರಿಟಿಷ್‌ ಆಡಳಿತವು ಚೀನ ಹಾಗೂ ಟಿಬೆಟ್‌ ರಾಯಭಾರಿಗಳ ಸಮ್ಮುಖದಲ್ಲಿ ರಚಿಸಿದ್ದ, ಮೆಕ್‌ಮೋಹನ್‌ ರೇಖೆಯನ್ನು ಚೀನ ಮಾನ್ಯ ಮಾಡುವುದಿಲ್ಲ. ಅಲ್ಲದೇ, ಭಾರತ-ಟಿಬೆಟ್‌ ನಡುವಿನ ಸಿಕ್ಕಿಂ ಒಪ್ಪಂದವನ್ನೂ ಅದು ಒಪ್ಪುವುದಿಲ್ಲ.

ಅಕ್ಸಾಯ್‌ ಚಿನ್‌ ಅಷ್ಟೇ ಅಲ್ಲದೇ ಅದು ಅರುಣಾಚಲ ಪ್ರದೇಶದ 90 ಸಾವಿರ ಚ. ಕಿ.ಮೀ ಪ್ರದೇಶವನು °ತನ್ನ ಪ್ರಾಂತ್ಯವೆಂದು ಕರೆಯುವುದಷ್ಟೇ ಅಲ್ಲದೇ, ಅದನ್ನು ದಕ್ಷಿಣ ಟಿಬೆಟ್‌ ಎನ್ನುತ್ತದೆ! ಅರುಣಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ, ಹಿಮಾಚಲ­ ಪ್ರದೇಶ ಹಾಗೂ ಲಡಾಖ್‌ ಜೊತೆಗೆ ಗಡಿ ಹೊಂದಿದೆ ಚೀನ.

ಅಕ್ಸಾಯ್‌ ಚಿನ್‌ನಲ್ಲೂ ಉಪಟಳ
ಚೀನ ಹಾಗೂ ಭಾರತ ಒಟ್ಟು 3,488 ಕಿಲೋಮೀಟರ್‌ಗಳ ಗಡಿಯನ್ನು ಹಂಚಿಕೊಂಡಿವೆ. ಭಾರತ ಮತ್ತು ಚೀನ ನಡುವಿನ ವಿವಾದಿತ ಗಡಿ ಪ್ರದೇಶಗಳಲ್ಲಿ ಅಕ್ಸಾಯ್‌ ಚಿನ್‌ ಪ್ರಮುಖವಾದದ್ದು. ಅಕ್ಸಾಯ್‌ ಚಿನ್‌ ಅನ್ನು ಭಾರತ ತನ್ನ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಒಂದು ಭಾಗವೆಂದು ಕರೆದರೂ ಇದನ್ನು ಒಪ್ಪಲು ಚೀನ ತಯಾರಿಲ್ಲ.

ಅದು ಅಕ್ಸಾಯ್‌ ಚಿನ್‌ ಅನ್ನು ಕ್ಸಿನ್‌ಜಿಯಾಂಗ್‌ ಉಯಿಘರ್‌ನ ಸ್ವಾಯತ್ತ ಪ್ರದೇಶದ ಭಾಗ ಎಂದು ಹೇಳುತ್ತದೆ. ಅಕ್ಸಾಯ್‌ ಚಿನ್‌ ಸುಮಾರು 37,244 ಚದರ ಕಿಲೋಮೀಟರ್‌ ವಿಸ್ತೀರ್ಣ ಹೊಂದಿದ್ದು 1962ರಲ್ಲಿ, ಚೀನ ಅದನ್ನು ಆಕ್ರಮಿಸಿಕೊಂಡಿತು. ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಅಕ್ಸಾಯ್‌ ಚಿನ್‌ ಅನ್ನು ಚೀನದ ಭಾಗವೆಂಬಂತೆ ಬಿಂಬಿಸಿ ಭಾರತದಿಂದ ತೀವ್ರ ಟೀಕೆ ಎದುರಿಸಿತ್ತು.

ವಿಶ್ವಸಂಸ್ಥೆಯಲ್ಲೂ ನಿರಂತರ ಅಡ್ಡಗಾಲು
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ಕೊಡುವ ವಿಚಾರದಲ್ಲಿ ಚೀನ ಅಡ್ಡಗಾಲು ಹಾಕುತ್ತಲೇ ಬಂದಿದೆ. ಅಮೆರಿಕ, ಬ್ರಿಟನ್‌, ಫ್ರಾನ್ಸ್‌ , ರಷ್ಯಾ ಹಾಗೂ ಚೀನ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿದ್ದು, ಚೀನವನ್ನು ಹೊರತುಪಡಿಸಿ, ಉಳಿದ ನಾಲ್ಕೂ ರಾಷ್ಟ್ರಗಳು ಭಾರತದ ಪರ ಇವೆ. ಆದರೆ ಚೀನ ಮಾತ್ರ ತನ್ನ ವಿಟೋ ಪವರ್‌ ಬಳಸಿ ಭಾರತಕ್ಕೆ ಖಾಯಂ ಸದಸ್ಯತ್ವ ಸಿಗದಂತೆ ನೋಡಿಕೊಳ್ಳುತ್ತಿದೆ. ಇದಕ್ಕಿಂತಲೂ ಹೆಚ್ಚಾಗಿ, ಭಾರತಕ್ಕೆ ಕಂಟಕವಾಗಿರುವವರಿಗೂ ಚೀನ ತನ್ನ ಈ ಶಕ್ತಿಯನ್ನು ಬಳಸಿ ಸಹಾಯ ಮಾಡುತ್ತದೆ.

ಉದಾಹರಣೆಗೆ, ಮುಂಬಯಿ ದಾಳಿಯ ಮಾಸ್ಟರ್‌ ಮೈಂಡ್‌ ಜೈಶ್‌ಮುಖ್ಯಸ್ಥ, ಭಯೋತ್ಪಾದಕ ಮಸೂದ್‌ ಅಜರ್‌ನನ್ನು ಅಂತಾರಾಷ್ಟ್ರೀಯ ಉಗ್ರನೆಂದು ಘೋಷಿಸಬೇಕೆಂಬ ಭಾರತದ ಕೋರಿಕೆಯನ್ನು ಚೀನ ತಡೆಯುತ್ತಲೇ ಬಂದಿತ್ತು. ಆದರೆ, ಪುಲ್ವಾಮಾ ದಾಳಿಯಲ್ಲಿ ಜೈಶ್‌ ಸಂಘಟನೆಯ ಪಾತ್ರ ಪತ್ತೆಯಾದಾಗ, ಭಾರತ ಈ ವಿಚಾರದಲ್ಲಿ ಚೀನದ ಮೇಲೆ ಯಾವ ಪರಿ ಅಂತಾರಾಷ್ಟ್ರೀಯ ಒತ್ತಡ ತಂದಿತೆಂದರೆ, ಚೀನ ಕಡೆಗೂ ಸುಮ್ಮನಾಯಿತು. ಅಜರ್‌ ಕಪ್ಪುಪಟ್ಟಿಯಲ್ಲಿ ಸೇರುವುದರ ಹಿಂದೆ ಭಾರತ ತೋರಿಸಿದ ರಾಜತಾಂತ್ರಿಕ ಚಾತುರ್ಯವನ್ನು ಚೀನಕ್ಕೆ ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ,

ಬೊಕ್ಕತಲೆ ಎಂದು ಸರೆಂಡರ್‌ ಆಗಬೇಕೇ?!
ಅಕ್ಸಾಯ್‌ ಚಿನ್‌ನ ಒಂದಷ್ಟು ಭಾಗವನ್ನು ಚೀನ ಆಕ್ರಮಿಸಿಕೊಂಡದ್ದನ್ನು ಹಾಗೂ ಅದು ಹೊಸ ನಕಾಶೆಯನ್ನು ಬಿಡುಗಡೆಗೊಳಿಸಿದ್ದನ್ನು ಪ್ರಶ್ನಿಸಿದಾಗ ಪ್ರಧಾನಿ ನೆಹರೂ ಅವರು ‘ಆ ಪ್ರದೇಶದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ. ಸಂಸತ್ತಿನ ಸಮಯವನ್ನು ಏಕೆ ಹಾಳು ಮಾಡುತ್ತೀರಿ’ ಎಂಬ ಹಾರಿಕೆಯ ಹೇಳಿಕೆ ನೀಡಿದ್ದರು! ಇದಕ್ಕೆೆ ಮಹಾವೀರ್‌ ತ್ಯಾಗಿ ಎಂಬ ಸಂಸದರು ನೀಡಿದ ಪ್ರತ್ಯುತ್ತರ ಈಗಲೂ ಪ್ರಖ್ಯಾತವಾಗಿದೆ. ತ್ಯಾಗಿಯವರು ತಮ್ಮ ಬೊಕ್ಕ ತಲೆಯನ್ನು ತೋರಿಸುತ್ತಾ “ಈ ತಲೆಯ ಮೇಲೆ ಒಂದು ಕೂದಲೂ ಇಲ್ಲ. ಹಾಗೆಂದು, ನನ್ನ ತಲೆಯನ್ನು ಶತ್ರುಗಳಿಗೆ ಸರೆಂಡರ್‌ ಮಾಡಬೇಕೇನು?” ಎಂದು ಕಿಡಿಕಾರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next