Advertisement

ಚೀನಕ್ಕೆ ಪಾಠ ಕಲಿಸಿ

01:05 AM Jun 18, 2020 | Hari Prasad |

ಭಾರತ ಮತ್ತು ಚೀನದ ಗಡಿ ಭಾಗದಲ್ಲಿ ಕೆಲ ದಿನಗಳಿಂದ ಏರ್ಪಟ್ಟಿದ್ದ ಬಿಕ್ಕಟ್ಟು ವಿಕೋಪಕ್ಕೆ ಹೋಗಿದ್ದರ ಪರಿಣಾಮ ಭಾರತದ ಇಪ್ಪತ್ತು ಯೋಧರು ವೀರ ಮರಣವಪ್ಪಿದ್ದಾರೆ. ಅತ್ತ ಚೀನದ 45 ಸೈನಿಕರೂ ಮೃತಪಟ್ಟಿರುವ ಬಗ್ಗೆ ವರದಿಯಾಗುತ್ತಿದೆ.

Advertisement

ಆದರೆ, ಚೀನ ಕೊರೊನಾ ಮರಣ ಪ್ರಮಾಣದಂತೆಯೇ, ತನ್ನ ಸೈನಿಕರ ಮರಣ ಪ್ರಮಾಣವನ್ನೂ ಮುಚ್ಚಿಟ್ಟಿದೆ.

ಆದಾಗ್ಯೂ, ಭಾರತ ಸೇರಿದಂತೆ ಇಡೀ ವಿಶ್ವವೇ ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ವ್ಯಸ್ತವಾಗಿರುವ ಈ ಸಮಯದಲ್ಲಿ ಚೀನ ಗಡಿ ಭಾಗಗಳಲ್ಲಿ ಎಸಗುತ್ತಿರುವ ದುರುಳತನಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಕಳೆದೊಂದು ತಿಂಗಳಿಂದ ಪೂರ್ವ ಲಡಾಖ್‌ನಲ್ಲಿ ಭಾರತ-ಚೀನ ಸೈನಿಕರ ನಡುವೆ ಸಂಘರ್ಷ ನಡೆದಿತ್ತಾದರೂ, ಅದು ಇಂಥ ಹಂತ ತಲುಪುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ನಮ್ಮ ಸೈನಿಕರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಇದು ಕೇವಲ ಮಾತಾಗಿ ಉಳಿಯಬಾರದು. ಚೀನಕ್ಕೆ ತಕ್ಕ ಪಾಠ ಕಲಿಸುವ ಯಾವುದೇ ಅವಕಾಶವನ್ನೂ ಕೈಬಿಡಬಾರದು.

ಚೀನ ಹಠಾತ್ತನೆ ಭಾರತದ ವಿರುದ್ಧ ಇಷ್ಟು ತೀವ್ರವಾಗಿ ವರ್ತಿಸುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದ ರಕ್ಷಣಾ ಇಲಾಖೆಯ ಪ್ರಮುಖ ಅಂಗವಾದ ಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌(ಬಿಆರ್‌ಓ) ಗಡಿ ಭಾಗದಲ್ಲಿನ ಅಭಿವೃದ್ಧಿಯಲ್ಲಿ, ರಸ್ತೆ ನಿರ್ಮಾಣದಲ್ಲಿ ಸಕ್ರಿಯವಾಗಿರುವುದು ಚೀನಕ್ಕೆ ಆತಂಕ ತಂದಿರುವ ವಿಚಾರ.

Advertisement

ಪ್ಯಾಂಗಾಂಗ್‌ ತ್ಸೋ ಲೇಕ್‌ ಸನಿಹದ‌ಲ್ಲಿ ಭಾರತವು ವ್ಯೂಹಾತ್ಮಕ ದೃಷ್ಟಿ­ಯಿಂದ ಮಹತ್ವಪೂರ್ಣ ರಸ್ತೆಯನ್ನು ನಿರ್ಮಿಸುತ್ತಿದ್ದು, ಇದರಿಂದಾಗಿ ಚೀನಿ ಸೈನಿಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ನಮ್ಮವರಿಗೆ ಸಾಧ್ಯವಾಗುತ್ತದೆ. ಗಮನಾರ್ಹ ಸಂಗತಿಯೆಂದರೆ, ತನ್ನ ಗಡಿಭಾಗದುದ್ದಕ್ಕೂ ರಸ್ತೆಗಳನ್ನು ನಿರ್ಮಿಸುವುದರಲ್ಲಿ ಚೀನ ನಿಸ್ಸೀಮವಾಗಿದೆ. ಆದರೆ, ಅದೇ ಕೆಲಸವನ್ನು ಭಾರತವು ಭಾರತದಲ್ಲೇ ಮಾಡಿದರೆ ಅದಕ್ಕೆ ತಕರಾರು!

ಡೋಕ್ಲಾಂ ಬಿಕ್ಕಟ್ಟಿನ ವಿಚಾರದಲ್ಲಿ ಅಂತಾರಾಷ್ಟ್ರೀಯವಾಗಿ ಮುಖಭಂಗ ಅನುಭವಿಸಿದ್ದ ಚೀನ ಈಗ ಈ ರೀತಿ ಮೃಗೀಯ ವರ್ತನೆ ತೋರುತ್ತಿರುವುದನ್ನು ನೋಡಿದರೆ, ಅದೆಂದಿಗೂ ಪಾಠ ಕಲಿಯುವುದಿಲ್ಲ ಎನ್ನುವುದು ಅರ್ಥವಾಗುತ್ತದೆ. ಹಾಗೆಂದು, ನಾವು ಯಾವ ಕಾರಣಕ್ಕೂ ಸುಮ್ಮನಿರಲೇಬಾರದು.

ಗಡಿ ಭಾಗದುದ್ದಕ್ಕೂ ನಡೆದಿರುವ ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಡುವುದೂ ಕೂಡ, ಚೀನಕ್ಕೆ ಕೊಡುವ ಬೃಹತ್‌ ಪೆಟ್ಟಾಗಲಿದೆ. ಕಳೆದ ಎರಡು ತಿಂಗಳಲ್ಲಿ ಚೀನ, ಭಾರತವಷ್ಟೇ ಅಲ್ಲದೇ ಸುಮಾರು 12 ರಾಷ್ಟ್ರಗಳೊಂದಿಗೆ ಒಂದಲ್ಲ ಒಂದು ರೀತಿಯ ಸಂಘರ್ಷಕ್ಕೆ ಇಳಿದಿದೆ. ಈ ಕಾರಣಕ್ಕಾಗಿ, ಎಲ್ಲಾ ರಾಷ್ಟ್ರಗಳೂ ಒಂದಾಗಿ ಚೀನಕ್ಕೆ ರಾಜತಾಂತ್ರಿಕ ಪೆಟ್ಟು ನೀಡುವಂತಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next